
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಗರ್ಭಪಾತ ಮಾಡಿದ ಆರೋಪ ಎದುರಿಸುತ್ತಿದ್ದ ವೈದ್ಯರನ್ನು ಖುಲಾಸೆಗೊಳಿಸಿ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ವೈದ್ಯರನ್ನು ಚಿಕ್ಕಮಗಳೂರಿನ ಡಾ| ಚಂದ್ರಶೇಖರ್ ಎಂದು ಗುರುತಿಸಲಾಗಿದೆ.
ಘಟನೆ ಏನು: ಲೈಂಗಿಕ ದೌರ್ಜನ್ಯಕ್ಕೊಳಗಾದ 12 ವರ್ಷ ವಯಸ್ಸಿನ ಬಾಲಕಿಯನ್ನು ಆರೋಪಿ ಸುಧೀರ್ ಮತ್ತು ಆತನ ಮನೆಯವರು ಗರ್ಭಪಾತ ಮಾಡಿಸಲು ಚಿಕ್ಕಮಗಳೂರಿನ ಡಾ| ಚಂದ್ರಶೇಖರ್ ಅವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ವೈದ್ಯಾಧಿಕಾರಿಗಳು ಬಾಲಕಿಯನ್ನು ವಿಚಾರಿಸಿದಾಗ ಆಕೆಯ ಪ್ರಾಯ 18 ವರ್ಷ 3 ತಿಂಗಳೆಂದು, ಆರೋಪಿ ಸುಧೀರ್ ತನ್ನ ಗಂಡನೆಂದು ತಿಳಿಸಿದ್ದಳು.
ಆಸ್ಪತ್ರೆಗೆ ಬರುವ ಮುಂಚೆ ಆಕೆಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ ಕಾರಣ ತೀವ್ರ ರಕ್ತಸ್ರಾವ ಆಗಿದ್ದು ವೈದ್ಯರು ಸಂತ್ರಸ್ತೆಯ ಪ್ರಾಣ ಉಳಿಸುವ ಉದ್ದೇಶದಿಂದ ಸಂತ್ರಸ್ತೆಯ ಗಂಡನೆಂದು ತಿಳಿಸಿದ್ದ ಆರೋಪಿ ಸುಧೀರನಿಂದ ಕಾನೂನು ಪ್ರಕಾರ ಒಪ್ಪಿಗೆ ಪತ್ರ ಪಡೆದುಕೊಂಡು ಕೂಡಲೇ ಚಿಕಿತ್ಸೆ ನೀಡಿ ಗರ್ಭದಲ್ಲಿ ಉಳಿದಿದ್ದ ರಕ್ತ ಮಿಶ್ರಿತ ಕಣಗಳನ್ನು ತೆಗೆದಿದ್ದರು.
ತನಿಖೆಯ ವೇಳೆ ವೈದ್ಯರು ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲ ವೈದ್ಯಕೀಯ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು.
ಡಾ| ಚಂದ್ರಶೇಖರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಪಿ.ಪಿ.ಹೆಗ್ಡೆ ಮತ್ತು ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು.
