ನವದೆಹಲಿ: ವಿಜಯೇಂದ್ರ ಬಿಎಸ್‌ವೈ ಅವರು ನಕಲಿ ಸಹಿ ಮಾಡಿದ್ದಾರೆ. ಆದರೆ ಈ ಕುರಿತು ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ಕಷ್ಟ. ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ವಿಜಯೇಂದ್ರ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್‌ವೈ ಪರವಾಗಿಲ್ಲ. ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರನನ್ನು ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇಬ್ಬರು, ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ.
ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ದಾರೆ. ಬಸವರಾಜ್ ಪಾಟೀಲ್ ಸೇಡಂ, ಬಿ.ವಿ ಶಿವಪ್ಪ, ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ, ಜೊತೆಗೆ ನನ್ನನ್ನು ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು,. ರಮೇಶ್ ಜಾರಕಿಹೊಳಿ ರಸ್ತೆಗೆ ಬರಲು ಬಿಡಲ್ಲ ಅಂತಾರೆ. ಏನು ಗೂಂಡಾಗಿರಿ ಮಾಡ್ತಿದ್ದಾರಾ? ಮೂರು ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯ ಮಾಡಬೇಕು ಎಂದರು.
ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನಾದರೂ ಮಾಡಿದ್ರಾ? ಶಿವಮೊಗ್ಗದಲ್ಲಿ ಔರಂಗಜೇಬನ ಫೋಟೋ ಹಾಕಿದ್ದಾಗ ಏನು ಮಾಡಿದ್ರು? ಜಮೀರ್ ಅಹಮದ್ ಖಾನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಮ್ಮ ತಂಡದಲ್ಲಿ ಕುಟುಂಬ ರಾಜಕೀಯ ಇಲ್ಲ. ಸಿದ್ದೇಶ್ವರ್, ಲಿಂಬಾವಳಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರ ಮನೆಯವರು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾಗಿದ್ದಾರೆ ಎಂದರು.
