
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಕ್ಟೋಬರ್ 24, 25 ಮತ್ತು 26 ರಂದು ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ನಡೆಯಲಿದೆ.
ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಪ್ರಾರಂಭವಾಗಿ ಇಲ್ಲಿಗೆ 102 ವರ್ಷಗಳು ಸಂದಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಂಸ್ಥೆಯ ಅಧಿವೇಶನ ಭಾರತದ ವಿವಿಧ ಸ್ಥಳಗಳಲ್ಲಿ ನಡೆದು ಬಂದಿದೆ.
ಇಲ್ಲಿಯ ತನಕ 50 ಅಧಿವೇಶನಗಳು ನಡೆದಿದ್ದು, ಇದೀಗ 51ನೇ ಅಧಿವೇಶನ ಉಡುಪಿಯಲ್ಲಿ ನಡೆಯುತ್ತಿದೆ. ಇಲ್ಲಿಯ ತನಕ ಕೇವಲ ಉತ್ತರ ಭಾರತದಲ್ಲಿಯೇ ನಡೆಯುತ್ತಿದ್ದ ಈ ಸಮ್ಮೇಳನ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದೇ ಹೇಳಬಹುದಾಗಿದೆ.
ಈ ಸಮ್ಮೇಳನದಲ್ಲಿ ಪೇಜಾವರ ಶ್ರೀಪಾದರು, ವಿದ್ಯಾಶ್ರೀಶ ಶ್ರೀಪಾದರು, ಸುಬುಧೇಂದ್ರ ತೀರ್ಥ ಶ್ರೀಪಾದರು (ಮಂತ್ರಾಲಯ), ಪತಂಜಲಿಯ ಶ್ರೀ ಬಾಬಾ ರಾಮದೇವ, ಶ್ರೀ ಆಚಾರ್ಯ ಬಾಲಕೃಷ್ಣ ಮುಂತಾದ ವಿದ್ವಾಂಸ ಸನ್ಯಾಸಿಗಳೂ ಉಪಸ್ಥಿತರಿರಲಿದ್ದಾರೆ.
- ಸಮ್ಮೇಳನದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ: ಪತಂಜಲಿಯ ಬಾಬಾ ರಾಮದೇವ್, ಶ್ರೀ ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6ರಿಂದ 7ರ ವರೆಗೆ ಯೋಗ-ಧ್ಯಾನಾದಿ ತರಗತಿಗಳೂ ನಡೆಯಲಿವೆ.
- ಭಗವದ್ಗೀತೆಯ ವಿಷಯದಲ್ಲಿ ಹಿರಿಯ ವಿದ್ವಾಂಸರಿಂದ ವಿಚಾರ ಮಂಡನೆ ನಡೆಯಲಿದೆ. ಹಾಗೂ ಐ.ಕೆ.ಎಸ್ ಮುಂತಾದ ವಿಷಯಗಳಲ್ಲಿಯೂ ಉನ್ನತ ಸ್ತರದಲ್ಲಿ ವಿಚಾರ ಮಂಡನೆಯಗಳು ನಡೆಯಲಿವೆ.
- ತರುಣರ ಕವಿಗೋಷ್ಠಿ, ಯುವ ವಿದ್ವಾಂಸ-ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಹಿರಿಯ ಪ್ರಸಿದ್ಧ ವಿದ್ವಾಂಸರಿಂದ ಶಾಸ್ತ್ರಾರ್ಥ ಸಭೆಗಳು ನಡೆಯಲಿವೆ.
- ಅಷ್ಟಮಠಗಳ ಆವರಣ, ಸಂಸ್ಕೃತ ಕಾಲೇಜು ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾದ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣಗಳು ನಡೆಯಲಿವೆ.
- ಕರ್ನಾಟಕದ ಪ್ರಸಿದ್ಧ ಅಭಿನವ ನೃತ್ಯ ಅಕಾಡೆಮಿಯಿಂದ ’ತದ್ಭಾರತಂ’ ನೃತ್ಯ, ಉಡುಪಿಯವರಿಂದ ಯಕ್ಷನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
- ಅಷ್ಟೇ ಅಲ್ಲದೆ ಭಾರತದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ, ಮಾರಾಟವೂ ನಡೆಯಲಿದೆ. ಪ್ರಸಿದ್ಧ ವಿದ್ವಾಂಸರ 25 ನೂತನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳೂ ನಡೆಯಲಿದೆ.
- ಭಾರತದ ಹಲವು ವಿಶ್ವವಿದ್ಯಾಲಯಗಳಿಂದ 18 ಕುಲಪತಿಗಳು ಉಪಸ್ಥಿತರಿರುತ್ತಾರೆ. ಅವರೊಂದಿಗೆ ಸಂವಾದ ಕಾರ್ಯಕ್ರಮಗಳೂ ನಡೆಯಲಿದೆ.
- ಭಾರತದ ಹಲವು ಭಾಗಗಳಿಂದ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ 2000ಕ್ಕೂ ಹೆಚ್ಚು ಶ್ರೇಷ್ಠ ವಿದ್ವಾಂಸರು ಆಗಮಿಸಿ, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ.
