
ಬೆಂಗಳೂರು: ಬೆಡ್‌ಶೀಟ್‌ಗಳನ್ನು ಅಡ್ಡಇಟ್ಟು ಮೊಬೈಲ್ ಅಂಗಡಿಗಳ ಕನ್ನ ಹಾಕುತ್ತಿದ್ದ ಬಿಹಾರ ಮೂಲದ 8 ಮಂದಿಯ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್ ಆಲಂ (30), ಜಾವೇದ್ ಆಲಂ (32), ಪವನ್ ಷಾ (29), ಮುನೀಲ್ ಕುಮಾರ್ (30), ರಿಜ್ವಾನ್ ದೇವನ್ (32), ಸಲೀಂ ಆಲಂ (30), ರಾಮೇಶ್ವರ ಗಿರಿ (40) ಹಾಗೂ ಸೂರಜ್ ಕುಮಾರ್ (34) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
“ಬೆಡ್‌ಶೀಟ್’ ಗ್ಯಾಂಗ್ ಎಂದೇ ಪ್ರಸಿದ್ಧಿಯಾಗಿರುವ ಈ ಗ್ಯಾಂಗ್ ಇತ್ತೀಚೆಗೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ನಾಗವಾರಪಾಳ್ಯದ ಸ್ಯಾಮ್‌ಸಾಂಗ್ ಶೋರೂಮಿಗೆ ನುಗ್ಗಿದ್ದ ಆರೋಪಿಗಳು 22 ಲಕ್ಷ ರೂ. ಮೌಲ್ಯದ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದರು.
ಆರೋಪಿಗಳು ಯಾವ ಅಂಗಡಿ ಕಳವು ಮಾಡಬಹುದು ಎಂದು ತಿಳಿದುಕೊಳ್ಳುತ್ತಿದ್ದರು. ತಡರಾತ್ರಿ ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಹಾಕಿ ಅಂಗಡಿ ಬಳಿ ಹೋಗುತ್ತಿದ್ದರು. ಬಳಿಕ ಆರೋಪಿಗಳ ಪೈಕಿ ಮೂವರು ಅಂಗಡಿಯ ರೋಲಿಂಗ್ ಶೆಟರ್ ಮುಂದೆ ಬೆಡ್‌ಶೀಟ್ ಅನ್ನು ಅಡ್ಡವಾಗಿ ಹಿಡಿದುಕೊಳ್ಳುತ್ತಿದ್ದರು. ಇತರೆ ಆರೋಪಿಗಳು ರೋಲಿಂಗ್ ಶೆಟರ್ ತೆರೆದು ಒಳ ಹೋಗುತ್ತಿದ್ದರು.
ಅಂಗಡಿಯೊಳಗೆ ಇರುವ ಆರೋಪಿಗಳು, ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಳ್ಳುತ್ತಿದ್ದರು. ಬಳಿಕ ಅಂಗಡಿ ಹೊರಗಡೆ ಇರುತ್ತಿದ್ದ ತಮ್ಮ ಸಹಚರರಿಗೆ ಕರೆ ಮಾಡುತ್ತಿದ್ದರು. ಆ ನಂತರ ಮತ್ತೆ ಅಂಗಡಿ ಮುಂಭಾಗದ ರೋಲಿಂಗ್ ಶೆಟ್ಟರ್‌ಗೆ ಅಡ್ಡವಾಗಿ ಬೆಡ್‌ಶೀಟ್ ಹಿಡಿದು ಹೊರಗಡೆ ಕರೆಸಿಕೊಳ್ಳುತ್ತಿದ್ದರು.
