
ಉಡುಪಿ: ಜಿಲ್ಲೆಯಲ್ಲಿ ಕುಚ್ಚಲಕ್ಕಿ ಭತ್ತದ ಬಿತ್ತನೆ ಕಡಿಮೆಯಾಗಿದ್ದರಿಂದ ಹೊರ ರಾಜ್ಯದ ಅಕ್ಕಿ ಅನಿವಾರ್ಯವಾಗುವ ಸ್ಥಿತಿ ಉದ್ಭವಿಸಿದೆ. ಇದರಿಂದ ಸ್ಥಳೀಯ ಕುಚ್ಚಲಕ್ಕಿ ದರ ಏರಿಕೆಗೂ ಕಾರಣವಾಗಬಹುದು.
ಈ ವರ್ಷ ಮಳೆ ಚೆನ್ನಾಗಿ ಬಂದಿದ್ದರೂ ಬಿತ್ತನೆ 35 ಸಾವಿರ ಹೆಕ್ಟೇರ್ ದಾಟಿರಲಿಲ್ಲ. ಕಳೆದ ವರ್ಷಕ್ಕಿಂತ ಸುಮಾರು 3 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ.
ಕಳೆದ ವರ್ಷ ಮುಂಗಾರಿನಲ್ಲಿ 1.52 ಲಕ್ಷ ಟನ್ ಹಾಗೂ ಹಿಂಗಾರಿನಲ್ಲಿ 0.2 ಲಕ್ಷ ಟನ್ ಭತ್ತದ ಇಳುವರಿ ಪಡೆಯಲಾಗಿತ್ತು. ಈ ವರ್ಷ ಮುಂಗಾರಿನಲ್ಲಿ 1.40 ಲಕ್ಷ ಟನ್ ಹಾಗೂ ಹಿಂಗಾರಿನಲ್ಲಿ 0.21 ಲಕ್ಷ ಮೆಟ್ರಿಕ್ ಇಳುವರಿ ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ಕಳೆದ ವರ್ಷ 1.72 ಲಕ್ಷ ಟನ್ ಭತ್ತದ ಉತ್ಪಾದನೆಯಾಗಿತ್ತು. ಈ ಬಾರಿ 1.61 ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಯಿದೆ. ಸುಮಾರು 11 ಲಕ್ಷ ಟನ್ ಇಳುವರಿ ಕಡಿಮೆಯಾಗಲಿದೆ ಎನ್ನುತ್ತಿದೆ ಕೃಷಿ ಇಲಾಖೆ.
ಕೇರಳ ಹಾಗೂ ಆಂಧ್ರ ಪ್ರದೇಶ, ತೆಲಂಗಾಣದ ಅಕ್ಕಿ ಹೆಚ್ಚಾಗಿ ಜಿಲ್ಲೆಗೆ ಬರುತ್ತದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲೂ ಇತ್ತೀಚೆಗೆ ಕುಚ್ಚಲು ಆಕ್ಕಿ ಬೆಳೆಯತೊಡಗಿದ್ದಾರೆ. ಪಡಿತರ ವ್ಯವಸ್ಥೆಯಡಿ ಹೊರ ರಾಜ್ಯದ ಕುಚ್ಚಲು ಅಕ್ಕಿಯನ್ನೇ ಈವರೆಗೂ ವಿತರಿಸುತ್ತಿದ್ದು, ಮುಂದೆಯೂ ಇದೇ ಮುಂದುವರಿಯಲಿದೆ ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು.
