Home ಸುದ್ದಿಗಳು ನಾಗಮಂಗಲದಲ್ಲಿ ಕೋಮುಗಲಭೆ: ಶನಿವಾರದವರೆಗೆ 144 ಸೆಕ್ಷನ್‌ ಜಾರಿ

ನಾಗಮಂಗಲದಲ್ಲಿ ಕೋಮುಗಲಭೆ: ಶನಿವಾರದವರೆಗೆ 144 ಸೆಕ್ಷನ್‌ ಜಾರಿ

Communal riots in Nagamangala: Section 144 enforced till Saturday

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು,ಹಿನ್ನೆಲೆಯಲ್ಲಿ ಶನಿವಾರದವರೆಗೆ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

ಬುಧವಾರ ಸಂಜೆ ಅದ್ಧೂರಿಯಾಗಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು.ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು.

ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಇನ್ನೇನು ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತುಕೊಂಡು ಸಹ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಇದಾದ ಸ್ವಲ್ಪಹೊತ್ತಿನಲ್ಲೇ, ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ದುಷ್ಕೃತ್ಯವೇ ನಡೆದುಹೋಗಿದೆ. ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್‌ಗಳನ್ನು ತೂರಿದೆ. ಗುಜರಿ ಅಂಗಡಿಯೊಂದು ಧಗಧಗಿಸಿ ಉರಿಯಿತು. ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಲಾಯಿತು. ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು ಹೊತ್ತಿ ಉರಿದವು.

ಕೆಲವು ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್‌, ತಲ್ವಾರ್‌ಗಳನ್ನು ಝಳಪಿಸುತ್ತಾ ಅಟ್ಟಹಾಸ ಪ್ರದರ್ಶಿಸಿದ್ದಾರೆ. ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ.

ಇಂದು ಶಾಲಾ-ಕಾಲೇಜುಗಳಿಗೆ ರಜೆ:
ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ನಾಗಮಂಗಲದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 
Previous articleಬೆಂಗಳೂರು: ಹಿಟ್​ & ರನ್​ಗೆ ಮೂವರು ವಿದ್ಯಾರ್ಥಿಗಳು ಬಲಿ
Next articleಉಚಿತ ಬೋರ್‌ವೆಲ್‌ ಕೊರೆಸಲು ಸರ್ಕಾರದಿಂದ ಸಹಾಯಧನ: ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ..?