
ಉಡುಪಿ: ಉಡುಪಿ ಜಿಲ್ಲೆಯಲ್ಲಿ 2.10 ಕೋಟಿ ರೂ. ಶಿಕ್ಷಣ ನಿಧಿಯನ್ನು ಸಂಗ್ರಹಿಸಿ ಸಹಕಾರಿ ಮಹಾಮಂಡಲಕ್ಕೆ ನೀಡಿದ್ದೇವೆ ಎಂದು ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅಜ್ಜರಕಾಡಿನ ಪುರಭವನದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್ಚಿನ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ನಷ್ಟದಲ್ಲಿದ್ದು, ಯಾವುದೇ ವ್ಯವಹಾರ ಮಾಡುತ್ತಿಲ್ಲ. ಹೀಗಾಗಿ ಯಾವ ಜಿಲ್ಲೆಗಳು ಹೆಚ್ಚು ಶಿಕ್ಷಣ ನಿಧಿ ಸಂಗ್ರಹಿಸುತ್ತವೆಯೋ ಅಂತಹ ಜಿಲ್ಲೆಗಳಿಗೆ ಶೇಕಡವಾರು ಹಣ ಪಾವತಿ ಮಾಡಬೇಕು.
ಆ ರೀತಿ ಮಾಡಿದರೆ ಬೇರೆ ಜಿಲ್ಲೆಯವರು ಕೂಡ ಚುರುಕಾಗುತ್ತಾರೆ. ಹೆಚ್ಚೆಚ್ಚು ಹಣ ಸಂಗ್ರಹಿ, ಕಾರ್ಯಕ್ರಮಗಳನ್ನು ಮಾಡುತ್ತಾರೆ. ಈ ರೀತಿಯ ಪ್ರಸ್ತಾವವನ್ನು ಮಹಾಮಂಡಲಕ್ಕೆ ಸಲ್ಲಿಸಿದ್ದೇವೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಗೆ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, ಸಹಕಾರಿ ಮಹಾಮಂಡಲ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ, ಯೂನಿಯನ್ ನ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಕುಮಾರ್ ಶೆಟ್ಟಿ, ಎಚ್. ಗಂಗಾಧರ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಎನ್. ಮಂಜಯ್ಯ ಶೆಟ್ಟಿ, ಹರೀಶ್ ಶೆಟ್ಟಿ, ಕೃಷ್ಣಮೂರ್ತಿ, ಸುರೇಶ್ ರಾವ್, ಕೆ. ಕೊರಗ ಪೂಜಾರಿ, ಗೋಪಿಕೃಷ್ಣ ರಾವ್, ಯೂನಿಯನ್ ನ ಸಿಇಒ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೂನಿಯನ್ ವತಿಯಿಂದ ಆಯೋಜಿಸಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಆಚರಿಸಿದ ಹಾಗೂ ಸಹಕಾರಿ ಸಪ್ತಾಹದ ಸಹಯೋಗ ವಹಿಸಿಕೊಂಡ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸಿಇಒಗಳನ್ನು ಗೌರವಿಸಲಾಯಿತು.
