
ಮಂಗಳೂರು: ಫೆಂಗಲ್ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮುಂದುವರಿದಿದ್ದು, ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಭಾರಿ ಮಳೆಯಾಗಿದೆ.
ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪ.ಪೂ ಕಾಲೇಜುಗಳಿಗೆ ರಜೆ ಜಿಲ್ಲಾಡಳಿತ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ವೇಳೆ ನಗರದಲ್ಲಿ ಎಂದಿನ ದಟ್ಟನೆ ಇರಲಿಲ್ಲ.
ಕೊಡಿಯಾಲಬೈಲ್ ನ ಮಾಲ್ ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 2 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿ ಎರಡು ಪಂಪ್ ಬಳಸಿ ನೀರು ಖಾಲಿ ಮಾಡಲಿದ್ದಾರೆ.
ನಗರದಲ್ಲಿ ಜಲಸಿರಿ ಸೇರಿದಂತೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ, ಕಾಮಗಾರಿ ನಡೆಸಿ ಗುಂಡಿಗೆ ತುಂಬಿಸಿದ್ದ ಮಣ್ಣು ರಸ್ತೆಗೆ ಬಂದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ.
ಸೋಮವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಗೆ ಹೊಟೇಲು, ಅಂಗಡಿಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸುವ ಕಾರ್ಯವೂ ಕೆಲವೆಡೆ ನಡೆಯಿತು. ಸದ್ಯ ಕರಾವಳಿಗೆ ಆರೆಂಜ್ ಅಲರ್ಟ್ ಮುಂದುವರಿದಿದ್ದು, ಮಳೆ ಮುಂದುವರಿಯುವ ನಿರೀಕ್ಷೆಯಿದೆ.
