
ಉಡುಪಿ: ಪರಶುರಾಮ ಥೀಮ್ ಪಾರ್ಕ್ ನ ಬಗ್ಗೆ ಸುಳ್ಳುಗಳನ್ನು ಪೋಣಿಸಿ ಕಾಂಗ್ರೆಸ್ ವಿವಾದ ಎಬ್ಬಿಸಿ, ಪ್ರವಾಸೋದ್ಯಮದ ಕಗ್ಗೊಲೆಯನ್ನು ನಡೆಸಿದೆ ಎಂದು ಶಾಸಕ ಸುನೀಲ್ ಕುಮಾರ್ ಕಿಡಿಕಾರಿದರು.
ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಅವರು, ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿದ್ದ ಪರಶುರಾಮ ಮೂರ್ತಿಯ ವಿನ್ಯಾಸವನ್ನು ಬದಲಿಸಲು ಶಿಲ್ಪಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದು, ಕಾರ್ಯಾರಂಭ ಮಾಡಿದ್ದಾರೆ.
ಆದರೆ ಪರಾಜಿತ ಅಭ್ಯರ್ಥಿ ದಾರಿಗೆ ಮಣ್ಣು ಹಾಕಿ ಸ್ಥಳಾಂತರ ಮಾಡದಂತೆ ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಅಭಿವೃದ್ಧಿಗೆ ತಡೆಯೊಡ್ಡುತ್ತಿರುವುದು ಸರಿಯಲ್ಲ.ಕಾಂಗ್ರೆಸ್ ಎಬ್ಬಿಸಿರುವ ವಿವಾದದ ಬಗ್ಗೆ ಈಗಾಗಲೇ ತನಿಖೆ ನಡೆಸಿ ಎಂದು ನಾನೇ ಹೇಳಿದ್ದೇನೆ. ಎಂದರು.
ವಿಷ ನೀಡಿ ಪತಿಯನ್ನು ಕೊಲೆ ಮಾಡಿದ ಪ್ರಕರಣ ಆರೋಪಿಗಳನ್ನು 3 ದಿನ ಪೋಲಿಸ್ ಕಸ್ಟಡಿಗೆ ಪಡೆಯುವ ಅವರು, ಅಮಾಯಕ ಶಿಲ್ಪಿಯನ್ನು 5 ದಿನ ಯಾಕೆ ಕಸ್ಟಡಿಗೆ ಪಡೆದಿದ್ದಾರೆ ಎಂದು ಪ್ರಶ್ನಿಸಿದರು.
ಸರಕಾರಿ ಕಾಮಗಾರಿಗಳಲ್ಲಿ ಸಂಬಂಧಿಸಿದ ಇಲಾಖೆ ದೂರು ನೀಡಿದರೆ ಕಾಮಗಾರಿಯ ಬಗ್ಗೆ ತನಿಖೆಯಾಗುವುದು ಸಾಮಾನ್ಯ. ಆದರೆ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಎಫ್.ಐ.ಆರ್ ಆಗಿ, ಅದೇ ವ್ಯಕ್ತಿ ಮಹಜರು ಪ್ರಕ್ರಿಯೆಗೆ ತೆರಳಿದ್ದಾರೆ. ಪೋಲಿಸ್ ಇಲಾಖೆ ಕಾಂಗ್ರೆಸ್ ಪ್ರಾಯೋಜಿತ ತನಿಖೆ ನಡೆಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದರು.
ಒಟ್ಟು 11 ಕೋಟಿ ರೂ ಕಾಮಗಾರಿಯಲ್ಲಿ 6 ಕೋಟಿ ರೂ ಬಿಡುಡೆಯಾಗಿದ್ದು, 4 ಕೋಟಿ ರೂ ಬಾಕಿ ಇದೆ. ಈ ಮೊತ್ತವನ್ನು ಬಿಡುಗಡೆ ಮಾಡಲಿ ಎಂದು ಕಾಂಗ್ರೆಸಿನ ಪರಾಜಿತ ಅಭ್ಯರ್ಥಿ ಯಾಕೆ ಹೇಳುವುದಿಲ್ಲ.
ಯೋಜನೆ ಪೂರ್ಣಗೊಳ್ಳಲು ಬಾಕಿ ಇರುವ ಮೊತ್ತವನ್ನು ಕಾಂಗ್ರೆಸ್ ಸರಕಾರವೇ ಬಿಡುಗಡೆ ಮಾಡಬೇಕಿದೆ. ಆದರೆ ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ, ಕಾಂಗ್ರೆಸ್ ಪ್ರೇರಿತ ತನಿಖೆ ನಡೆಯುತ್ತಿದೆ ಎಂದು ಆರೋಪಿಸಿದರು.
ಪರಶುರಾಮ ಮೂರ್ತಿಯ ಬಗ್ಗೆ ಆರೋಪಿಸುತ್ತಿರುವ ಪರಾಜಿತ ಅಭ್ಯರ್ಥಿಯೂ ಗುತ್ತಿಗೆದಾರರಾಗಿದ್ದು, ಅವರ ಕಳಪೆ ಕಾಮಗಾರಿಯ ಬಗ್ಗೆ 100 ದೂರುಗಳನ್ನು ಕೊಡಬಲ್ಲೆ. ಮೂರ್ತಿ ಫೈಬರ್ ಅಲ್ಲ ಎಂದು ನ್ಯಾಯಾಲಯದಲ್ಲಿ ಸಾಭೀತಾಗಿದೆ. ಫೈಬರ್ ಉದಯ್ ಅವರಿಗೆ ಥೀಮ್ ಪಾರ್ಕ್ ಕಲ್ಪನೆಯೇ ಇಲ್ಲ. ಹೀಗಾಗಿ ಅದಕ್ಕೆ ಧಾರ್ಮಿಕತೆಯ ಲೇಪನ ನೀಡಿ ಜನರ ಭಾವನೆಗಳ ಜೊತೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು.
ಜೀವಂತ ಇರುವಾಗಲೇ ಕಾಂಗ್ರೆಸಿನ ನಾಯಕರಾದ ವೀರಪ್ಪ ಮೊಯ್ಲಿ ಹಾಗು ಗೋಪಾಲ ಭಂಡಾರಿಯವರ ಶವಯಾತ್ರೆ ನಡೆಸಿದ ನಾಯಕನಿಂದ ಕಾರ್ಕಳದ ಅಭಿವೃದ್ಧಿ ಸಾಧ್ಯವೇ? ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಜನಜಾಗೃತಿ ವೇದಿಕೆ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ನೀರೆ ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ಸಂತೋಷ್ ಬೈಲೂರು, ಗುರುರಾಜ್ ಮಾಡ ಉಪಸ್ಥಿತರಿದ್ದರು.
