
ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ಬಳಿ ಶಾಲಾ ಮಕ್ಕಳಿದ್ದ ಬಸ್ ಚಾಲಕನನ್ನ ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಟಿರ್ಮಿಶ್ ಶಾಲೆಗೆ ಸೇರಿದ ಶಾಲಾ ಬಸ್ ಮೇಲೆ ಸೋಮವಾರ ಮಧ್ಯಾಹ್ನ ವ್ಯಕ್ತಿಗಳ ಗುಂಪು ದಾಳಿ ಮಾಡಿ ಚಾಲಕ ಜೇಮ್ಸ್ ಧೋನ್ ಎಂಬುವವನ ಮೇಲೆ ಹಲ್ಲೆ ನಡೆಸಲಾಗಿದೆ.
ನಿನ್ನೆ ಸಂಜೆ 3.45ರ ಸುಮಾರಿಗೆ ಮಕ್ಕಳನ್ನ ಡ್ರಾಪ್ ಮಾಡಿಲು ಶಾಲೆಯಿಂದ ಹೊರಟಿದ್ದ ಶಾಲಾ ಬಸ್ಗೆ ಸ್ಕಾರ್ಪಿಯೊ ಕಾರಿನಿಂದ ಅಡ್ಡಕಟ್ಟಿ ನಾಲ್ಕೈದು ಯುವಕರು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಗಳ ಕಾರಿಗೆ ಸೈಡ್ ಕೊಡದಿದ್ದಕ್ಕೆ ಶಾಲಾ ಬಸ್ ಅಡ್ಡಹಾಕಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.
ಘಟನೆ ಏನು: ಶಾಲಾ ವಾಹನದ ಹಿಂದೆ ಸ್ಕಾರ್ಪಿಯೋ ಕಾರು ಬರುತ್ತಿತ್ತು. ಈ ವೇಳೆ ದಾರಿ ಬಿಡುವಂತೆ ಕಾರು ಚಾಲಕ ಒಂದೇ ಸಮನೆ ಹಾರ್ನ್ ಮಾಡಿದ್ದ. ಆಗ ಶಾಲಾ ವಾಹನದ ಚಾಲಕ ದಾರಿ ಬಿಡದೆ ಬಸ್ ಚಲಾಯಿಸಿದ್ದಾನೆ. ಇದಕ್ಕೆ ಕೋಪಗೊಂಡ ಕಾರು ಚಾಲಕ ಶಾಲಾ ವಾಹನವನ್ನ ಅಡ್ಡಗಟ್ಟಿ ಚಾಲಕನನ್ನ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಲೋಹದ ವಸ್ತುವನ್ನು ಬಳಸಿ ಬಸ್ ಕಿಟಕಿಯನ್ನು ಒಡೆದು ಬಲವಂತವಾಗಿ ಬಸ್ಸಿನೊಳಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಶಾಲಾ ಬಸ್ನಲ್ಲಿದ್ದ ಮಕ್ಕಳು ಹೆದರಿ ಕಿರುಚಾಡಿಕೊಂಡಿದ್ದಾರೆ.
