
ಪಾಕಿಸ್ತಾನ: ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಡರಾತ್ರಿ ಭಾರೀ ಸ್ಫೋಟ ಸಂಭವಿಸಿದೆ.
ಸಿಂಧ್ ಪ್ರಾಂತ್ಯದಲ್ಲಿ ಪವರ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಇಂಜಿನಿಯರ್ಗಳ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿತ್ತು.
ಬಿಬಿಸಿ ವರದಿಯ ಪ್ರಕಾರ, ಸ್ಫೋಟದಲ್ಲಿ ಇಬ್ಬರು ಚೀನಾದ ನಾಗರಿಕರು ಸಾವನ್ನಪ್ಪಿದ್ದಾರೆ. ಪ್ರತ್ಯೇಕತಾವಾದಿ ಬಲೂಚಿಸ್ತಾನ್ ರಾಷ್ಟ್ರೀಯ ಸೇನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
ಸಿಂಧ್ ಪ್ರಾಂತೀಯ ಗೃಹ ಸಚಿವ ಜಿಯಾ ಉಲ್ ಹಸನ್ ಲಾಂಜಾರ್ ಅವರು ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ವಿದೇಶಿಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
