
ಬಂಟ್ವಾಳ: ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಅ. 21ರಿಂದ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿಗೆ ಯಕ್ಷಗಾನ ಪ್ರದರ್ಶನಕ್ಕೆ ತೆರಳಿದ್ದ ವೇಳೆ ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾಗೆದೆ. ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಟೀಲು ಮೇಳ, ಪುತ್ತೂರು ಮೇಳ, ಸುಂಕದಕಟ್ಟೆ ಮೇಳ, ಕದ್ರಿ ಮೇಳ, ಕುಂಬ್ಳೆ ಮೇಳ, ಸುರತ್ಕಲ್ ಮೇಳ, ಎಡನೀರು ಮೇಳ, ಹೊಸನಗರ ಮೇಳ ಸೇವೆ ಸಲ್ಲಿಸಿ, ಕಳೆದ ವರ್ಷ ಹನುಮಗಿರಿ ಮೇಳದಲ್ಲಿದ್ದು, ಈ ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಬೇಕಿತ್ತು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
