ಪುಣೆ: ಮಳೆಗಾಲದಲ್ಲಿ ರಜೆ ಬಂದಾಗ ಜಲಪಾತ, ಸಮುದ್ರ ಹೀಗೆ ಹಲವು ಕಡೆ ಸುತ್ತಾಡಲು ಹೋಗಿ ನೀರುಪಾಲಾಗುತ್ತಿರುವ ಘಟನೆ ನಾವು ಕೇಳುತ್ತಲೇ ಇರುತ್ತೇವೆ. ಈ ನಡುವೆ ಒಂದೇ ಕುಟುಂಬದ ಐವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜಲಸಮಾಧಿಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಶಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಇಬ್ಬರ ಮೃತದೇಹಕ್ಕಾಆಗಿ ಶೋಧ ಕಾರ್ಯ ಮುಂದುವರೆದಿದೆ.
ಭಾನುವಾರದ ರಜಾ ದಿನವನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಹೋದ ಕುಟುಂಬ ದುರಂತ ಅಂತ್ಯ ಕಂಡಿದೆ. ಘಟನೆ ಕುರಿತ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿದೆ. ಲೋನಾವಾಲಾ ಅಧಿಕಾರಿಗಳು ಇದೀಗ ಪ್ರವಾಸಿ ತಾಣಕ್ಕೆ ನಿರ್ಬಂಧ ವಿಧಿಸಿದ್ದಾರೆ. ಮಹಿಳೆ ಹಾಗೂ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಕೊನೆ ಕ್ಷಣದ ವಿಡಿಯೋ ಈಗ ವೈರಲ್ ಆಗುತ್ತಿದೆ.
