
ಭಾರತ ಎಂಬ ಪದದ ಹಿಂದೆ ಚರಿತ್ರೆಯಿದೆ. ಶತಶತ ವರ್ಷಗಳ ಪರಂಪರೆಯಿದೆ. ಈ ನೆಲದೊಂದಿಗೆ ಬೆಳೆದು ಬಂದ ಆರ್ಷೇಯ ಜ್ಞಾನ ಸಂಪತ್ತಿನ ಪರಂಪರೆಯಿದೆ. ಆಗಮಗಳ, ವೇದೋಪನಿಷತ್ತುಗಳ, ಪುರಾಣಗಳ, ರಾಮಾಯಣ, ಮಹಾಭಾರತಂಥ ಶ್ರೇಷ್ಠ ಜ್ಞಾನನಿಧಿಯ ಇತಿಹಾಸದ ಪರಂಪರೆಯ ಕೊಂಡಿಯಿದೆ. ಸಂಗೀತ ಪರಂಪರೆಯಿದೆ. ಸಾಂಸ್ಕೃತಿಕ ಮೌಲ್ಯಗಳ ಪರಂಪರೆಯಿದೆ. ಭಾರತೀಯ ಭಾಷೆಗಳ ಶ್ರೀಮಂತ ಸಾಹಿತ್ಯಗಳ ಮೇರು ಪರ್ವತವಿದೆ. ವಿಶಾಲ ಸಮಾನತೆಯ ಆದರ್ಶಗಳಿವೆ. ಭವ್ಯ ಇತಿಹಾಸ ಇದೆ. ಗಣಿತ, ವಿಜ್ಞಾನ, ಖಗೋಳದ ಸಾಧನೆಗಳು ಭರಪೂರವಿದೆ. ವೀರಾತಿವೀರರ ಶೌರ್ಯ ಪರಂಪರೆಯಿದೆ. ನೆಲದ ರಕ್ಷಣೆಗಾಗಿ ಮಡಿದುಹೋದ ಅಸಂಖ್ಯ ಶೂರರುಗಳ ಬಲಿದಾನದ ಹಿನ್ನೆಲೆಯಿದೆ. ಉತ್ತಮೋತ್ತಮ ಧ್ಯೇಯಗಳಿವೆ. ಈ ನೆಲದ ಸಂಸ್ಕೃತಿಯ ಇತಿಹಾಸ ಅಪ್ರತಿಮವಾಗಿ ಜೀವಂತವಾಗಿದೆ. ಭಾರತ ಎಂಬುದು ಸುಮ್ಮನೆ ಹುಟ್ಟಿದ ಪದವಲ್ಲ. ಅದಕ್ಕೊಂದು ಚರಿತ್ರೆ ಇದೆ. ಸುಮ್ಮನೆ ಇಂಗ್ಲಿಷ್ ಮೂಲದ ಉಚ್ಚಾರಣೆಗೆ ಬೇಕಾಗಿ ಎಲ್ಲ ಪದಗಳಿಗೂ ಇಯಾ ಎಂದು ಸೇರಿಸಿ ಆದ ಪದವಿದಲ್ಲ. ಎಂದೋ ಆಗಬೇಕಿದ್ದ ಭಾರತ ಈಗಲಾದರೂ ಭಾರತ ಆಗುತ್ತಿದೆ. ಇದಕ್ಕೇಕೆ ಅಪಸ್ವರ? ಅವಿವೇಕದ ಪ್ರದರ್ಶನ? ಅಜ್ಞಾನದ ಅಭಿವ್ಯಕ್ತಿ? ಅಸಡ್ಡೆಯ ಉದ್ಧಟತನ? ಬೌದ್ಧಿಕ ದುರುಳುತನ? ಭಾರತ ಭಾರತವೇ ಆದರೆ ಭಾರತೀಯರಿಗೇಕೆ ಅಸಹನೆ? ಅಸಹನೆಯಾದರೆ ಅವರು ಭಾರತೀಯರಲ್ಲ!
ಇಂಡಿಯಾ ದಟ್ ಈಸ್ ಭಾರತ ಎಂದು ಸಂವಿಧಾನದಲ್ಲಿ ಇದ್ದುದನ್ನು ಮರೆತರೆ ನಾವು ಭಾರತೀಯರಾಗೋದು ಯಾವಾಗ? ಏಕೀಕೃತ ರಾಷ್ಟ್ರವಾಗುವುದು ಯಾವಾಗ? ಭಾರತ ಹೆಸರಿಲ್ಲದೆ ವಂದೇ ಮಾತರಂ ಭಾವನೆ ಹುಟ್ಟೋಕೆ ಹೇಗೆ ಸಾಧ್ಯ? ಭಾರತ ಮಾತಾ ಕೀ ಜೈ ಹೇಗೆ ಆದೀತು? ಮೇರಾ ಭಾರತ್ ಮಹಾನ್ ಆಗೋದು ಹೇಗೆ? ಅದೆಲ್ಲ ಬಿಡಿ, ಭಾರತ್ ಜೋಡೋ ಆಗೋದಾದರೂ ಹೇಗೆ ಸಾಧ್ಯ? ಎಂಬುದನ್ನು I.N.D.I.A. ಒಕ್ಕೂಟವೇ ಹೇಳಬೇಕು. ಇಂಡಿಯಾ (INDIA) ಎಂಬ ಪದವೇ ಪಾಶ್ಚಾತ್ಯ ಮೂಲದ ಪರಿಕಲ್ಪನೆಯಿಂದ ಹುಟ್ಟಿದ್ದು. ನಮ್ಮನ್ನು ನಮಗೇ ಪರಕೀಯರನ್ನಾಗಿಸುವ ಕುಯುಕ್ತಿಯ ಹುನ್ನಾರದಲ್ಲಿ ಸೃಜಿಸಿದ ಪದವಿದು. ಇದೇ ಪದ ಎಲ್ಲೆಲ್ಲೂ ಊರ್ಜಿತವಾಗೇ ಬಂದಿದೆ. ಹೇಗೆ ಅಂತೀರಾ? ಕೇವಲ ಇಂಡಿಯಾ ಮಾತ್ರವಲ್ಲ, ಮೂಲದಲ್ಲಿಯ ಭಾರತೀಯ ಪದಗಳನ್ನು ತಿರುಚಿದ್ದನ್ನು ಗ್ರಹಿಸಿ ನೋಡಿ: ನಾಗಾವರ್ತ- ಇದು ನಾಗಾಗಳು ವಾಸಿಸುವ ಭೂಪ್ರದೇಶಕ್ಕೆ ಮಹಾಭಾರತದಲ್ಲಿ ಉಲ್ಲೇಖಿಸಲಾದ ಹೆಸರು. ನೆಹರೂ ಕಾಲದಲ್ಲಿ ಪರಿವರ್ತತ, ಮತಾಂತರ ಕ್ರೈಸ್ತರು ಅದನ್ನು ನಾಗಾಲ್ಯಾಂಡ್ ಮಾಡಿದರು. ಐರ್ಲೆಂಡ್, ಇಂಗ್ಲೆಂಡ್, ಐಸ್ ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಪೋಲ್ಯಾಂಡ್, ಹಾಲೆಂಡ್…ಇತ್ಯಾದಿ ಹೆಸರಿನಂತೆ ಕರೆಯಲಾಯಿತು. ದೇಶವೇ ಮತಾಂತರ ಆಗಿದ್ದು ಹೀಗೆ! ಅಯೋನಿಯಾ ಎಂಬುದು ಗ್ರೀಸ್ ಆದದ್ದು ಹೇಗೆ? ಪಾಲಿಸ್ತಾನ್ ಎಂಬುದು ಪ್ಯಾಲೆಸ್ಟೈನ್ ಆದದ್ದು ಹೇಗೆ? ಠಾಕೂರ್ ಇದ್ದದ್ದು ಠಾಗೋರ್ ಹೇಗಾಯ್ತು? ಮುಸ್ಲಿಂ ಬಾಯಲ್ಲಿ ಟೈಗೋರ್ ಆಗಿದ್ದು ಹೇಗೆ? ಸುಮೇರಿಯಾ, ಮೆಸಪೊಟೋಮಿಯಾ ಹಾಳಾದದ್ದು ಹೇಗೆ? ಐಗುಪ್ತ ಹೇಗೆ ಈಜಿಪ್ಟ್ ಆಯ್ತು? ಬ್ರಹ್ಮದೇಶ- ಬರ್ಮ- ಮ್ಯಾನ್ ಮಾರ್ ಆದದ್ದು ಹೇಗೆ? ಶ್ರೀರಂಗಪಟ್ಟಣವನ್ನು ಬಿಳಿಯರ ಬಾಯಲ್ಲಿ ಸೆಲಿಂಗ್ ಪಟ್ಯಾಂ, ಶ್ರೀರಾಂಪುರವನ್ನು ಕ್ರೈಸ್ತರು ಇಂದಿಗೂ ಸೊಂಪೂರ್ ಎನ್ನುತ್ತಾ ಹೋದರೆ ಭಾರತ, ಭಾರತ ಆಗುವುದೇ ಇಲ್ಲ; ಇಂಡಿಯಾ ಆಗೇ ಇರುತ್ತದೆ; ತೀರುತ್ತದೆ. ತನಗೆ ಬೇಕಾದಂತೆಯೂ, ಪಾಶ್ಚಾತ್ಯರ ಬಾಯಲ್ಲೂ ಸುಲಭವಾಗಿ ಹೇಳಲು ಅನುಕೂಲಕರ ಎಂಬ ನೆಲೆಯಲ್ಲೂ ಈ ದೇಶವನ್ನು ಇಂಡಿಯಾ ಎಂದೇ ನಾಮಕರಣ ಮಾಡಿಸಿದ ನೆಹರೂ, ಇಂಡ್ಯ ಇಂಡ್ಯ (ಮಂಡ್ಯ ಅಂದ ಹಾಗೆ) ಅಂತ ಕರೆಯುತ್ತಿದ್ದುದು ಮಾತುಗಳಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಪ್ರೊ.ಕೆ.ಎಸ್.ನಾರಾಯಣ ಆಚಾರ್ಯರು ಹೇಳುತ್ತಿದ್ದರು.
ಈಗಿನ ನಮ್ಮ ಸಂವಿಧಾನವು ಪ್ರಾಚೀನ ಭಾರತೀಯ ಮೌಲ್ಯಗಳನ್ನೇ ಬಿಂಬಿಸುವುದಿಲ್ಲ. ಧರ್ಮದ ಪರಿಕಲ್ಪನೆಯೇ ಅದರಲ್ಲಿ ಇಲ್ಲ. ಯಾವುದನ್ನು ರಾಜಧರ್ಮ ಅಂದರೆ, ಯಾವುದು ಅಂದು ದೊರೆಗೆ, ಪ್ರಜೆಗೆ, ಮಂತ್ರಿಗೆ, ಋಷಿಮುನಿಗಳಿಗೆ, ನಾನಾ ವೃತ್ತಿಪರರಿಗೆ, ಸಂವಿಧಾನ ಎನಿಸಿತ್ತೋ, ಯಾವುದನ್ನು ಯಾರೂ ಮೀರಬಾರದು ಎಂಬ ಸುಪ್ತ ಪ್ರಜ್ಞೆ, ಮೀರಿದರೆ ಅಪರಾಧ ಎಂಬ ಭಯ ಇತ್ತೋ ಅದು ಸುತರಾಂ ಈ ಹೊಸ ಸಂವಿಧಾನದಲ್ಲಿ ಇಲ್ಲ ಎನ್ನುತ್ತಾರೆ ಶ್ರೀ ಎಸ್.ಗುರುಮೂರ್ತಿಯವರು. ಇದರ ಪರಿಣಾಮವೇನು ಎಂಬುದನ್ನು ಆಚಾರ್ಯರು ಸಹಿತ ಅನೇಕ ವಿದ್ವಾಂಸರು ನಿದರ್ಶನ ಸಹಿತ ತಮ್ಮ ಕೃತಿಗಳಲ್ಲಿ ಬರೆದುಕೊಂಡಿದ್ದಾರೆ. ಇಂಡಿಯಾ ದಟ್ ಈಸ್ ಭಾರತ ಎಂದು ಸಂವಿಧಾನದಲ್ಲಿ ಬರೆದುದು ಯಾವ ಪ್ರಯೋಜನಕ್ಕೆ ಯಾವ ಸಂದರ್ಭದಲ್ಲಿ ಬಂದೀತು ಎಂಬ ಪ್ರಶ್ನೆ ಹುಟ್ಟುವುದು ಇಂಥ ನಿದರ್ಶನಗಳನ್ನು ಅವಲೋಕಿಸಿದಾಗ! ಭಾರತೀಯತ್ವ ಎಂಬುದು ಹರಿಯುವುದು ಭಾರತದಲ್ಲಲ್ಲದೇ ಇಂಡಿಯಾತ್ವದಿಂದ ಅಲ್ಲ ಎಂಬುದನ್ನು ಮನಗಂಡೇ ಈಗಿನ ಕೇಂದ್ರ ಸರ್ಕಾರ ಭಾರತ ಎಂದು ಸಂಬೋಧಿಸಲು ಮುಂದಾಗಿದ್ದು. ಇದರಲ್ಲಿ ತಪ್ಪೇನಿದೆ? ಹಾಗಾದರೆ, ಇಂಡಿಯಾದಲ್ಲಿ ಈವರೆಗೆ ಭಾರತೀಯತ್ವ ಹರಿಯಲೇ ಇಲ್ಲವೆ ಎಂದು ಪ್ರಶ್ನಿಸಿದರೆ, ಹರಿದಿದೆ ಎಂಬುದೇ ಸತ್ಯ! ಸಾಕಷ್ಟು ಹರಿದಿದೆ. ಹರಿಯುತ್ತಲೂ ಇದೆ. ಈ ಹರಿವಿಗೆ ಇನ್ನಷ್ಟು ವೇಗದ ಆವೇಗದ ಆವಶ್ಯವಿದೆ. ಇಲ್ಲದಿದ್ದರೆ ಹರಿವು ಅಡ್ದ ದಾರಿ ಹಿಡಿದು ಬರಿದಾದೀತು! ಅಡ್ದ ದಾರಿ ಹಿಡಿಯುವ ಲಕ್ಷಣಗಳು ಗೋಚರಿಸುತ್ತಲೇ ಇವೆ. ಅದಕ್ಕಾಗಿ, ಭಾರತ, ಭಾರತವೇ ಅಗಬೇಕಿದೆ. ಅಷ್ಟಕ್ಕೂ ಭಾರತ, ಭಾರತವೇ ಆಗದೆ ಮತ್ತೇನಾದೀತು?
ಕವರ್ ಮಾಡಿಕೊಂಡೇ ಇಂಡಿಯಾವನ್ನು ನೆಹರೂ ಡಿಸ್ಕವರಿ ಮಾಡಿದ್ದನ್ನು ನೋಡಿದ್ದಾಯಿತು. ಕವರ್ ಅಂದರೆ ಮುಚ್ಚುವುದು. ಇಂಡಿಯಾವನ್ನು ನೆಹರೂ ಡಿಸ್ಕವರಿ ಮಾಡಿದರು. ಕವರ್ ಮಾಡಿಕೊಂಡು ನೆಹರೂ ಡಿಸ್ಕವರಿ ಮಾಡಿದಂತೆ ಈಗ ಮೋದಿ ಭಾರತವನ್ನು ಡಿಸ್ಕವರಿ ಮಾಡಲು ಹೊರಟಿದ್ದಲ್ಲ. ಆದ್ದರಿಂದ ಹೊಸತೇನನ್ನೂ ಮೋದಿ ಡಿಸ್ಕವರಿ ಮಾಡುತ್ತಿಲ್ಲ. ಭಾರತವನ್ನು ಕವರ್ ಮಾಡಿಕೊಂಡಿದ್ದ ಇಂಡಿಯಾ ಎಂಬ ಮುಸುಕನ್ನು ತೆಗೆಯುತ್ತಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಡಿಸ್ ಕವರ್ ಮಾಡಬೇಕಿದ್ದ ಭಾರತವನ್ನು ಈಗ ಮೋದಿ ಮಾಡಿ ತೋರಿಸುತ್ತಿದ್ದಾರೆ. ತಪ್ಪೇನಿದೆ? ನಷ್ಟವೇನಿದೆ? ಯಾರಿಗೆ ಯಾವ ತೊಂದರೆಯಿದೆ? ಅಷ್ಟಕ್ಕೂ ಇಂಡಿಯಾ ಎಂಬುದಕ್ಕೆ ಏನರ್ಥ? ಭಾರತ ಎಂಬುದಕ್ಕೆ ನಾನಾ ಭಾರತೀಯ ಅರ್ಥಗಳಿವೆ. ಇದು ಲಾಗಾಯ್ತಿನಿಂದಲೂ ಇರುವ ಹೆಸರು. ಅನ್ವರ್ಥಕವೂ ಅಸ್ಮಿತೆಯೂ ಅಹುದು. ಆದರೆ, INDIA ಎಂಬ ಪದ ಹುಟ್ಟಿದ್ದು 1947 ರ ಅನಂತರ. ಅಂದರೆ, ಸ್ವಾತಂತ್ರ್ಯಾನಂತರದಲ್ಲಿ ಹುಟ್ಟಿಕೊಂಡ ಹೆಸರು. ಅದರ ವಿಸೃತ ರೂಪ ಹೀಗಲ್ಲವೆ: INDIA NATION DECLARED IN AUGUST. ಈ ಹೆಸರಿಗೆ ಇತಿಹಾಸ ಎಲ್ಲಿಂದ ಬಂತು? ಬ್ರಿಟಿಷರು ದೇಶ ಬಿಟ್ಟುಹೋದ ಮರುಗಳಿಗೆಯಲ್ಲೇ ಈ ನೆಲದ ಹೆಸರನ್ನು ಭಾರತ ಎಂದು ಬದಲಿಸಬೇಕಿತ್ತು. ಭಾರತೀಯತ್ವ ಆವಾಗಲೇ ಊರ್ಜಿತಗೊಳಿಸಿದ್ದರೆ ಈಗ ದೇಶದ ಭಾವನಾತ್ಮಕ, ಬೌದ್ಧಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಶ್ರೀಮಂತಿಕೆಯ ಹಾದಿ ಭಾರತೀಯ ಪರಂಪರೆಯ ಮಾರ್ಗದಲ್ಲೇ ಸಾಗುತ್ತಿತ್ತು. Of course ಸಾಗಿದೆ. ಸಾಗಲಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ಆದರೆ, ಇಷ್ಟೊಂದು ವಿಪ್ಲವಗಳು ಸ್ವಾತಂತ್ರ್ಯಾನಂತರದಲ್ಲಿ ಘಟಿಸುತ್ತಲೇ ಇರುತ್ತಿರಲಿಲ್ಲವೇನೋ! ಹೆಸರಿನ ಬದಲಾವಣೆಯಲ್ಲೂ ಭಾರತ ಹಳಿ ತಪ್ಪಿತು! ಇಂಡಿಯಾವೂ ಹಳಿ ತಪ್ಪಿತು! ತಪ್ಪಿಸಿದವರು ಮಾತ್ರ ಹಳಿ ಹಿಡಿದರು!
ಹೋಗಲಿ ಬಿಡಿ. 76 ವರ್ಷಗಳ ಹಿಂದೆ ಮಾಡಬೇಕಾಗಿದ್ದನ್ನು ಅಂದು ಯಾವ ಮಹಾಶಯನೂ ಮಾಡಲು ಮುಂದಾಗಲಿಲ್ಲ. ಈಗಲಾದರೂ ಭಾರತ ಎಂದೇ ಈ ನೆಲದ ನಿಜ ಅಸ್ಮಿತೆಯನ್ನು ಗುರುತು ಮಾಡುತ್ತಿದ್ದಾರೆ. ಅದ್ಧೂರಿಯ ಜಿ20 ಶೃಂಗಸಭೆಯುದ್ದಕ್ಕೂ ಭಾರತದ್ದೇ ಹವಾ ನಡೆದುಹೋಯಿತು. ಈಗ ಇಂಡಿಯಾ ಎಂಬುದು ಇತಿಹಾಸದ ಪುಟಗಳಲ್ಲಿ ಸೇರಿತು. ಇನ್ನೇನಿದ್ದರೂ ಭಾರತದ ಇತಿಹಾಸದ ಆರಂಭ. ಸ್ವಾತಂತ್ರ್ಯಾನಂತರದ ಭಾರತದ ನಿಜ ಇತಿಹಾಸ ರಚನೆ ಆರಂಭವಾಗೋದು ಎಂದು ನೆಹರೂ ಅಂದೇ ಆಡಿದ್ದರು. ಅಂತೆಯೇ ಇತಿಹಾಸ ಬರೆಸಿದ್ದರು ಕೂಡ! ಹಾಗೇ ಇತಿಹಾಸವನ್ನು ತಿರುಚಿದ್ದರು ಕೂಡ. ಅದನ್ನೇ ನಾವೆಲ್ಲ ಓದಿಕೊಂಡು ಬಂದಿದ್ದೇವೆ. ಈಗ ಅದರೊಂದಿಗೆ ಅದರಲ್ಲಿ ಬಿಟ್ಟುಹೋದ ಸತ್ಯವನ್ನೂ ಸೇರಿಸಿ ಮೋದಿ ಭಾರತದ ಇತಿಹಾಸವನ್ನು ಬರೆಯಲು ಮುಂದಾಗಿದ್ದಾರೆ. ಈ ಐತಿಹಾಸಿಕ ನಡೆ ಭವಿಷ್ಯದ ಭಾರತಕ್ಕೆ ಅನಿವಾರ್ಯ ಎಂಬುದರಲ್ಲಿ ಎರಡು ಮಾತುಗಳಿಲ್ಲ.
ಮಹಾಭಾರತವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಅಲ್ಲಿಯೂ ಹತ್ತಾರು ಜನ ಒಂದೊಂದು ಭಾರತದ ಕನಸು ಕಂಡಿದ್ದರು. ದುರ್ಯೋಧನ ಕಂಡದ್ದು ಪಾಂಡವ ನಿರ್ನಾಮದ ಕನಸಿನ ಭಾರತ; ಭೀಷ್ಮನದು ಅನ್ಯಾಯವೇ ಕಾಣದ ಬರೀ ಭಜನೆಯ ಭಾರತ; ವಿಭಜನೆಯ ಭಾರತ; ಕರ್ಣ ಕಂಡದ್ದು ಸೇಡಿನ ಭಾರತ; ದುಃಶಾಸನ ಕಂಡಿದ್ದು ಬರ್ಬರ ಭಾರತ. ಹೀಗೆ ಎಲ್ಲರೂ ಒಂದೊಂದು ಬಗೆಯಲ್ಲಿ ಕನಸಿನ ಭಾರತವನ್ನು ಕಂಡರು. ಆದರೆ, ಧೃತರಾಷ್ಟ್ರ ಕಾಣಲೇ ಇಲ್ಲ. ಆದರೂ ಹಸ್ತಿನೆಯನ್ನು ಆಳಿದ, ತಾಳಿದ. ಬಾಳಿದ. ಹಸ್ತಿನೆಯ ದುರಂತಕ್ಕೂ ಮುನ್ನುಡಿಯಾಗಿ ನಿಂತ. ದ್ರೋಣ ಕಂಡದ್ದು ಹೊಟ್ಟೆಪಾಡಿನ ಭಾರತವನ್ನು; ಶಕುನಿ ಕಂಡದ್ದು ಜೂಜಿನ ಭಾರತ; ಕುಂತಿ ಕಂಡದ್ದು ದುಃಖದ-ಶೋಕದ ಕಣ್ಣೀರಿನ ಭಾರತ, ದ್ರೌಪದಿ ಕಂಡದ್ದು ಸ್ತ್ರೀಯರು ಮಾನವಂತರಾಗಿ ಬಾಳಬೇಕಾದ, ಮರ್ಯಾದಸ್ಥ ಭಾರತವನ್ನು, ಪಾಂಡವರು ಕಂಡದ್ದು ಗಾಂಧಿಯ ಭಾರತ. ಆದರೆ, ಶ್ರೀಕೃಷ್ಣ ಕಂಡದ್ದು ಮಾತ್ರ ಅಸುರಾಸುರ ಯುದ್ಧದ ಅನಂತರ ವಿಜಯೀ ಭಾರತವನ್ನು! ಹಾಗಾದರೆ ನಾವು ಯಾವ ಭಾರತದ ಕನಸನ್ನು ಕಾಣಬೇಕು?
ನಾವು ಕನಸು ಕಾಣಬೇಕಾದ ಭಾರತ ಮಾರೀಚ, ರಾವಣ, ಶೂರ್ಪಣಖೆ, ತಾಟಕಿ, ಇಂದ್ರಜಿತು ಇಂಥವರ ಮಾಯಾ ಭಾರತವನ್ನಲ್ಲ. ಚಿರಂಜೀವಿ ವಿಭೀಷಣನ ಸ್ಥಿರ ಧರ್ಮಾಧಾರಿತ ಭಾರತವನ್ನು! ಇದು ನಮ್ಮ ಪೂರ್ವಜರ ಜಾಯಮಾನ. ಅದೇ ನಮ್ಮ ಜಾಯಮಾನವೂ ಆಗಬೇಕು. ಅಂದರೆ, ಹುಟ್ಡಿನಿಂದಲೇ ಸಿದ್ಧವಾದ ಬದುಕು, ಫಲ, ಛಲ, ಸಾಮ್ರಾಜ್ಯ, ಸವಾಲುಗಳನ್ನೆದುರಿಸುವ ಧೈರ್ಯ, ಬುದ್ಧಿ, ಯುಕ್ತಿ, ಸಮರ್ಥ ಆಡಳಿತ, ಅದಕ್ಕೊಂದು ಅರ್ಥ, ದಿಕ್ಕು, ನೀತಿ ನಿಯಮಾಧಾರಿತ ಚೌಕಟ್ಟು ಇರುವ ಭಾರತವನ್ನು! ಮೋದಿಯಿಂದ ಮಾತ್ರ ಅದು ಸಾಧ್ಯ ಎಂಬ ನಂಬಿಕೆ ಈ ದೇಶದ ಅದೆಷ್ಟೋ ಭಾರತೀಯರಲ್ಲಿದೆ. ಅದಕ್ಕಾಗಿ ಮೋದಿಯ ಭಾರತವನ್ನು ಬೆಂಬಲಿಸೋಣ. ಆ ಮೂಲಕ ನಾವು ಅಕ್ಷರಶಃ ಭಾರತೀಯರಾಗೋಣ. ಭಾವನಾತ್ಮಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಭಾರತೀಯರಾಗೋಣ.
ಟಿ.ದೇವಿದಾಸ್
