
ಮಣಿಪಾಲ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ರೈಲ್ವೇ ಇಲಾಖೆಯು ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ 2018ರಲ್ಲಿ ಸೇತುವೆ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಪ್ರಮುಖ ಗುತ್ತಿಗೆದಾರ ಹಾಗೂ ಉಪ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಂಬಂಧಪಟ್ಟವರಿಗೆ ಪತ್ರ ಬರೆಯುವಂತೆ ಅಭಿಯಂತರಿಗೆ ನಿರ್ದೇಶಿಸಿದರು.
ಈ ಹಿಂದಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ, ರಾತ್ರಿ ಮತ್ತು ಹಗಲು ಪಾಳಿಯಲ್ಲಿ ಕೆಲಸ ಮಾಡಿ ಜ. 10ರೊಳಗೆ ಸೇತುವೆಯನ್ನು ಸಂಚಾರಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರು ಹಾಗೂ ರಾ.ಹೆ. ವಿಭಾಗದ ಅಭಿಯಂತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ನಿರ್ದೇಶಿಸಿದರು.
