
ತೆಕ್ಕಟ್ಟೆ: ಇನ್ನೋವಾ ಕಾರಿಗೆ ಹಿಂದಿನಿಂದ ಇನ್ಸುಲೇಟರ್ ಲಾರಿ ಡಿಕ್ಕಿ ಹೊಡೆದ ಘಟನೆ ಕುಂಭಾಶಿ ರಾ.ಹೆ. 66ರಲ್ಲಿ ನಡೆದಿದೆ.
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಇನ್ಸುಲೇಟರ್ ಲಾರಿ ಮಗುಚಿ ಬಿದ್ದಿದ್ದು, ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಘಟನೆಯಲ್ಲಿ ಕೇರಳದ ಪಯ್ಯನೂರು ಮೂಲದ ನಾರಾಯಣನ್, ವಾತ್ಸಲ, ಅನಿತಾ, ಚೈತ್ರಾ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನುಳಿದ ಗಾಯಾಳುಗಳಾದ ಮಧುಸೂದನ್, ಭಾರ್ಗವನ್, ಚಾಲಕ ಫೈಝಲ್ ಹಾಗೂ ಇನ್ಸುಲೇಟರ್ ಚಾಲಕ ಹೊನ್ನಾವರದ ಮಹೇಶ್ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತವಾದ ತತ್ಕ್ಷಣ ಸ್ಥಳೀಯರು ಕ್ಷಿಪ್ರಗತಿಯಲ್ಲಿ ಸ್ಪಂದಿಸಿ ಗಾಯಾಳುಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದೇ ಗಾಯಾಳುಗಳು ಬದುಕುಳಿಯಲು ಕಾರಣವಾಯಿತು ಎನ್ನಲಾಗಿದೆ.
