
ದೆಹಲಿ: ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಅಲ್ಲಿನ ಜನತೆಗೆ ಆತಂಕ ಮತ್ತಷ್ಟು ಹೆಚ್ಚಿದೆ. ಇದೀಗ ಬಿಸಿಲಾಘಾತದಿಂದಾಗಿ 48 ತಾಸಿನಲ್ಲಿ 50 ಜನರು ಕೊನೆಯುಸಿರೆಳೆದಿದ್ದಾರೆ.
ಉತ್ತರ ಮತ್ತು ಪೂರ್ವ ಭಾರತದ ಹಲವು ಪ್ರದೇಶಗಳಲ್ಲಿ ಜನರು ಬಿಸಿ ಗಾಳಿಯ ಹೊಡೆತಕ್ಕೆ ಸಿಕ್ಕಿದ್ದು, ಶಾಖದ ಹೊಡೆತದಿಂದ ಸಾವು ಸಂಭವಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆ. ಇರಲಿದ್ದು, ರಾತ್ರಿ ತಾಪಮಾನ 35.2 ಡಿಗ್ರಿ ಸೆ. ಇದೆ. ಮೇ 12 ರಿಂದ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಿದೆ. ಕಳೆದ 36 ದಿನಗಳಲ್ಲಿ 16 ದಿನ ಪಾದರಸ 45 ಡಿಗ್ರಿಗಿಂತ ಅಧಿಕ ತಾಪಮಾನ ದಾಖಲಿಸಿದೆ.
ಅದೇ ರೀತಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಹಲವು ಭಾಗಗಳಲ್ಲಿ 43 ರಿಂದ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಉಂಟಾಗಿದೆ.
ಇದಕ್ಕಾಗಿ ರೋಗಿಗಳನ್ನುಉಪಚರಿಸಲು ವಿಶೇಷ ಘಟಕಗಳನ್ನು ಸ್ಥಾಪಿಸಬೇಕೆಂದು ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ದೆಹಲಿಯ ಕೇಂದ್ರದ ನಿರ್ವಹಣೆಯಲ್ಲಿರುವ ಆರ್ಎಂಎಲ್ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಉಷ್ಣ ಅಲೆ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ವೆಂಟಿಲೇಟರ್ ನೆರವು ಪಡೆಯ ಬಹುದಾಗಿದೆ. ಬಿಸಿಗಾಳಿಯಿಂದಾಗಿ ಅಸ್ವಸ್ಥರಾದವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಆಸ್ಪತ್ರೆಗಳು ಸಜ್ಜಾಗಿರಬೇಕು ಎಂದು ಸಚಿವರು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ.
ಶಾಖದಿಂದ ಸುರಕ್ಷತೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯ ಅರಿವು ಮೂಡಿಸಲಿದ್ದು, ನೀರು ಸೇವನೆ, ಗರಿಷ್ಠ ಬಿಸಿಲು ಇರುವ ಸಮಯದಲ್ಲಿ ಹೊರ ಹೊಗದೇ ಇರುವುದು, ಉಸಿರಾಟ ಸಮಸ್ಯೆ ಬಂದಾಗ ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯುವುದು ಇತ್ಯಾದಿ ಮುನ್ನಚ್ಚರಿಕೆ ಕ್ರಮ ಅಗತ್ಯ.
