ಬಿಲಿಯನೇರ್ ವಾಣಿಜ್ಯೋದ್ಯಮಿ ಎಲೋನ್ ಮಸ್ಕ್ ಅವರು ತಮ್ಮ ಕಂಪನಿ ನ್ಯೂರಾಲಿಂಕ್‌ನಲ್ಲಿ ಕಾರ್ಯನಿರ್ವಾಹಕರಾಗಿರುವ ಶಿವೋನ್ ಜಿಲಿಸ್ ಅವರೊಂದಿಗೆ ತಮ್ಮ 4 ನೇ ಮಗುವಿನ ಜನನವನ್ನು ಖಚಿತಪಡಿಸಿದ್ದಾರೆ. ಅವಳಿ ಮಕ್ಕಳಾದ ಸ್ಟ್ರೈಡರ್ ಮತ್ತು ಅಜುರೆ ಮತ್ತು ಮಗಳು ಅರ್ಕಾಡಿಯಾ ಜೊತೆ ಇದೀಗ ಸೆಲ್ಡಾನ್ ಲೈಕರ್ಗಸ್ ಹೆಸರಿನ ಗಂಡು ಮಗುವಿನ ಜನನವನ್ನು ಶಿವನ್ ಜಿಲಿಸ್ ಖಚಿತಪಡಿಸಿದ್ದಾರೆ. ಮಸ್ಕ್ ಒಡೆತನದ ಎಕ್ಸ್ ನಲ್ಲಿ ಶಿವನ್ ಜಿಲಿಸ್ ಅವರು ಹಂಚಿಕೊಂಡ ಪೋಸ್ಟ್‌ಗೆ ಮಸ್ಕ್ ಪ್ರತಿಕ್ರಿಯಿಸಿ ಸುದ್ದಿಯನ್ನು ಧೃಢಪಡಿಸಿದ್ದಾರೆ.
ಎಲೋನ್ ಮಸ್ಕ್‌ನ ನವಜಾತ ಶಿಶುವಿನ ಸುದ್ದಿಯು 26 ವರ್ಷದ MAGA ಪ್ರಭಾವಿ ಆಶ್ಲೇ ಸೇಂಟ್ ಕ್ಲೇರ್ ಅವರು ಟೆಕ್ ಬಿಲಿಯನೇರ್‌ನ 13 ನೇ ಮಗುವಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡ ಕೆಲವೇ ಸಮಯದ ಅಂತರದಲ್ಲಿ ಬಂದಿದೆ. ಈಕೆಯು ತನ್ನ ಮಗುವಿನ ತಂದೆ ಎಲೋನ್ ಮಸ್ಕ್ ಎಂದು ಹೇಳಿಕೊಂಡಿದ್ದಾರೆ. ಎಲೋನ್ ಮಸ್ಕ್ ವಿರುದ್ಧ ಮಗುವಿನ ಪಾಲನೆಗಾಗಿ ಮೊಕದ್ದಮೆ ಹೂಡಿರುವ ಕ್ಲೇರ್, ಟೆಸ್ಲಾ ಮುಖ್ಯಸ್ಥ ಮಗುವಿನ ಪಾಲನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಇದರೊಂದಿಗೆ ಒಟ್ಟು 14 ಮಕ್ಕಳನ್ನು ಮಸ್ಕ್ ಪಡೆದಿದ್ದಾರೆ. ಶಿವೋನ್ ಜಿಲಿಸ್ ಅವರ ನಾಲ್ಕು ಮಕ್ಕಳನ್ನು ಹೊರತುಪಡಿಸಿ, ಟೆಕ್ ಬಿಲಿಯನೇರ್ ತನ್ನ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಅವಳಿಗಳಾದ ವಿವಿಯನ್ ಮತ್ತು ಗ್ರಿಫಿನ್ ಮತ್ತು ತ್ರಿವಳಿಗಳಾದ ಕೈ, ಸ್ಯಾಕ್ಸನ್ ಮತ್ತು ಡಾಮಿಯನ್ ಅವರೊಂದಿಗೆ ಐದು ಮಕ್ಕಳನ್ನು ಹೊಂದಿದ್ದಾರೆ. ಅವರ ಮೊದಲ ಮಗು ನೆವಾಡಾ ಅಲೆಕ್ಸಾಂಡರ್ ಮಸ್ಕ್ ಕೇವಲ 10 ವಾರಗಳ ವಯಸ್ಸಿನಲ್ಲಿ ನಿಧನವಾಗಿತ್ತು. ಸಂಗೀತಗಾರ್ತಿ ಗ್ರಿಮ್ಸ್ ಜೊತೆಗೆ ಮಸ್ಕ್ ಮೂರು ಮಕ್ಕಳಾದ ಪುತ್ರ ಎಕ್ಸ್ ಮತ್ತು ಟೆಕ್ನೋ ಮೆಕಾನಿಕಸ್ ಹಾಗೂ ಮಗಳು ಎಕ್ಸಾ ಡಾರ್ಕ್ ಸೈಡೆರೆಲ್ ಅನ್ನು ಹೊಂದಿದ್ದಾರೆ. ಮಕ್ಕಳನ್ನು ಪಡೆಯಲು ಮಸ್ಕ್ IVF ತಂತ್ರಜ್ಞಾನ ಮತ್ತು ಬಾಡಿಗೆ ತಾಯಿಯ ಸಹಾಯವನ್ನೂ ಪಡೆದಿದ್ದಾರೆ.
