ನ್ಯೂಯಾರ್ಕ್: ಯು.ಎಸ್ (United States) ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಶನಿವಾರ (ಫೆಬ್ರವರಿ 8, 2025) ಕೇಮನ್ ದ್ವೀಪಗಳ ನೈಋತ್ಯದಲ್ಲಿ 7.6 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, ಸುನಾಮಿ ಮುನ್ನೆಚ್ಚರಿಕೆಯ ಭಾಗವಾಗಿ ತೀರ ಪ್ರದೇಶದ ದ್ವೀಪಗಳ ಮತ್ತು ಕರಾವಳಿಯ ಸಮೀಪವಿರುವ ಜನರನ್ನು ಒಳನಾಡಿಗೆ ತೆರಳುವಂತೆ ಸೂಚಿಸಲಾಗಿದೆ.
ಸಮುದ್ರದ ಮಧ್ಯದಲ್ಲಿ ಸ್ಥಳೀಯ ಕಾಲಮಾನ ಸಂಜೆ 6:23 ಕ್ಕೆ ಹತ್ತು ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ತಿಳಿಸಿದೆ. ಇದರ ಕೇಂದ್ರಬಿಂದುವು ಕೇಮನ್ ದ್ವೀಪಗಳಲ್ಲಿನ ಜಾರ್ಜ್ ಟೌನ್‌ನ ದಕ್ಷಿಣ-ನೈಋತ್ಯಕ್ಕೆ 130 ಮೈಲಿಗಳಾಗಿದೆ (209 ಕಿಲೋಮೀಟರ್) ಎಂದು ಸಂಸ್ಥೆ ಹೇಳಿದೆ. ಅಮೇರಿಕಾದ ಮುಖ್ಯ ಭೂಭಾಗಕ್ಕೆ ಯಾವುದೇ ಸುನಾಮಿ (Tsunami) ಎಚ್ಚರಿಕೆ ಇಲ್ಲ, ಆದರೆ ಪೋರ್ಟೊ ರಿಕೊ ಮತ್ತು ಯು.ಎಸ್ ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಯನ್ನು ಯು.ಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ನೀಡಿದೆ.
