
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಗ ಸಾಗರ್ ಖಂಡ್ರೆ ಗೆಲುವು ಸಾಧಿಸಿರೊದೇ ಮುಸ್ಲಿಂ ಮತಗಳಿಂದ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧರ್ಮದಂಗಲ್ ಗೆ ಕಾರಣವಾಗಿದೆ.
ಬೀದರ್ನಲ್ಲಿ ನಡೆದ ವಕ್ಫ್ ಅದಾಲತ್ನಲ್ಲಿ ಸಚಿವ ಜಮೀರ್ ಅಹ್ಮದ್ ಈ ಹೇಳಿಕೆ ನೀಡಿದ್ದಾರೆ. ವಕ್ಫ್ ಅದಾಲತ್ನಲ್ಲಿ ವ್ಯಕ್ತಿಯೊಬ್ಬರು ಅಂತ್ಯಸಂಸ್ಕಾರ ನಡೆಸಲು ಅರಣ್ಯ ಜಾಗ ಬಿಡಿಸಿಕೊಡಬೇಕು ಎಂದು ಕೇಳಿಕೊಂಡಾಗ ಇದಕ್ಕೆ ಉತ್ತರಿಸುವ ವೇಳೆ ಸಚಿವ ಜಮೀರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಮಗ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದ ಗೆದ್ದಿದ್ದು, ಹೀಗಾಗಿ ಮುಸ್ಲಿಮರ ಕೆಲಸ ಅವರು ಮಾಡಿಕೊಡಲೇಬೇಕು ಎಂಬ ಹೇಳಿಕೆ ಇದೀಗ ಭಾರೀ ಚರ್ಚಗೆ ಕಾರಣವಾಗಿದೆ.
ಮುಸ್ಲಿಂ ಮತಗಳಿಂದಲೇ ಗೆದ್ದಿರೋದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಜಮೀರ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಕೂಡ ನಡೆಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು ತಮ್ಮ ತುಷ್ಟೀಕರಣ ರಾಜಕಾರಣದ ಕಾರಣದಿಂದಾಗಿ ಸಾಂವಿಧಾನಿಕ ಹುದ್ದೆಗಳಿಗೆ ಪದೇ ಪದೇ ಅಪಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಸಂವಿಧಾನಕ್ಕೆ ಮತ್ತೊಮ್ಮೆ ಅಪಚಾರ ಎಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.
