
ಮಂಗಳೂರು: ಸಾಲಗಾರರೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನು ಬಂಧಿಸಿದ ಘಟನೆ ನಡೆದಿದೆ.
ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಕುಟಿನ್ಹೋ ಪದವಿನ ನಿವಾಸಿ ಮನೋಹರ್ ಪಿರೇರಾ(47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇವರು ಮಂಗಳವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಆತ್ಮಹತ್ಯೆಗೆ ಬ್ಯಾಂಕ್ ಅಧ್ಯಕ್ಷರೇ ಹೊಣೆ ಎಂಬುದಾಗಿ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಅನಿಲ್ ಲೋಬೋರನ್ನು ಬಂಧಿಸಲಾಗಿದೆ.
ಮನೋಹರ್ ಪಿರೇರಾ ತನ್ನ ತಮ್ಮ ಜೀವನ್ ಪಿರೇರಾ ಅವರೊಂದಿಗೆ ವಾಸವಿದ್ದರು. ಮನೋಹರ್ 10 ವರ್ಷಗಳ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಖರೀದಿಸಿದ್ದರು. ಮೆಲ್ಕಮ್ ಅವರು ತಮ್ಮ ಮನೋಹರ್ ಪಿರೇರಾ ಅವರ ಮೂಲಕ ಸಾಲದ ಕಂತು ಪಾವತಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಪಾವತಿಸಿರಲಿಲ್ಲ. ಹಾಗಾಗಿ ಬ್ಯಾಂಕ್‌ನವರು ಎರಡು ವರ್ಷಗಳ ಹಿಂದೆ ಮನೆಯನ್ನು ಜಫ್ತಿ ಮಾಡಿದ್ದರು.
ಇದರಿಂದಾಗಿ ಮನೋಹರ್ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಎರಡು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದರು. 2023ರ ಫೆಬ್ರವರಿಯಲ್ಲಿ ಸಿಸ್ಟರ್ ಕ್ರಿಸ್ಟಿನ್ ಅವರು ಅವರ ಚಾರಿಟಿಯಿಂದ 15 ಲ.ರೂ.ಗಳನ್ನು ಮನೋಹರ್ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು. ಮನೋಹರ್ ಅವರು ಬ್ಯಾಂಕ್ ಅಧ್ಯಕ್ಷರೊಂದಿಗೆ ಮಾತನಾಡಿ ಸೆಲ್ಫ್ ಚೆಕ್ ನೀಡಿದ್ದರು. ಅನಂತರ ಜಪ್ತಿ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ನೀಡಲಾಗಿತ್ತು.
ಆದರೆ 15 ಲ.ರೂ.ಗಳಲ್ಲಿ 9 ಲ.ರೂ.ಗಳನ್ನು ಅಧ್ಯಕ್ಷರು ಸೆಲ್ಫ್ ಚೆಕ್ ವಿತ್‌ಡ್ರಾ ಮಾಡಿದ್ದಾರೆ. ಹಾಗಾಗಿ ಪೂರ್ಣವಾಗಿ ಸಾಲ ಮರುಪಾವತಿಯಾಗಲಿಲ್ಲ ಎನ್ನಲಾಗಿದೆ.
ಮನೋಹರ್ ಅವರ ಸಹೋದರ ಜೀವನ್ ಪಿರೇರಾ ನೀಡಿರುವ ಈ ದೂರಿನಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 108ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
