
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನಲ್ಲಿ ವಲಸೆ ಕಾರ್ಮಿಕನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
ಭಯೋತ್ಪಾದಕರು ಉತ್ತರ ಪ್ರದೇಶದ ಬಿಜ್ನೋರ್ ಮೂಲದ ಶುಭಂ ಕುಮಾರ್ ಮೇಲೆ ದಾಳಿ ನಡೆಸಿದ್ದಾರೆ.
ತ್ರಾಲ್‌ನ ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ ಬಳಿಕ ಶುಭಂ ಕುಮಾರ್ ಕೈಗೆ ಗಾಯಗಳಾಗಿವೆ. ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಅ.20ರಂದು ಗಂಡರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದ ನಿರ್ಮಾಣ ಸ್ಥಳದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಒಬ್ಬ ವೈದ್ಯ ಮತ್ತು 6 ವಲಸೆ ಕಾರ್ಮಿಕರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು.
ಅ.18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರದ ವಲಸೆ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಒಂದೇ ವಾರದಲ್ಲಿ ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ.
