ಬೆಂಗಳೂರು: ಮುಡಾ ಹಗರಣದ ಆರೋಪ ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಫೆಕ್ಟ್ ನೀಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು ಮುಡಾ ಹಗರಣದ ಬಗ್ಗೆ ಪದೇಪದೆ ಮಾತನಾಡಿದ್ದೂ ಕೂಡ ಸಾಕಷ್ಟು ಎಫೆಕ್ಟ್ ಆಗಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದರು.
ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ. ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆ ಅಳಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಆ ಮಾತನ್ನು ಹೇಳಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಆದರೆ ನೋಟಿಸ್ ಕೊಡುತ್ತಾರೆ ಇದು ಪಕ್ಷಕ್ಕೆ ಒಳ್ಳೆಯದಲ್ಲ ಎಂದರು.
ಎಐಸಿಸಿ ನಾಯಕರು ಯಾಕೆ ನನಗೆ ಎಚ್ಚರಿಕೆ ನೀಡುತ್ತಾರೆ? ನಾನು ಕಾಂಗ್ರೆಸ್ನ ಹಿರಿಯ ನಾಯಕ. ನಾನು (ಕೋಳಿವಾಡ) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ನೇಹಿತರು. ನನ್ನ ಅಭಿಪ್ರಾಯವನ್ನ ನಾನು ಹೇಳಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆಯವರೂ ಕೂಡ ಅವರು ಇರಬಹುದು, ಇಲ್ಲದೇ ಇರಬಹುದು, ಪಕ್ಷ ಇರುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
