
ಕೇರಳ: ಇಲ್ಲಿನ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಕ್ರಿಶ್ಚಿಯನ್ ಗ್ರೂಪ್ ಕನ್ವೆನ್ಷನ್ ಕೇಂದ್ರದಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿ ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
2,000 ಮಂದಿ ಭಾಗಿಯಾಗಿದ್ದ ಕ್ರಿಶ್ಚಿಯನ್ ಗುಂಪಿನ ಸಮಾವೇಶ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಗು ಸೇರಿದಂತೆ 7ಮಂದಿಯನ್ನು ಐಸಿಯುವಿಗೆ ದಾಖಲು ಮಾಡಲಾಗಿದ್ದು, ಒಂಭತ್ತು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಸ್ಫೋಟದ ಪರಿಣಾಮ ಕನ್ವೆನ್ಷನ್ ಹಾಲ್ನಲ್ಲಿ ಅಪಾರ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಇನ್ನು, ಸ್ಫೋಟಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಉಗ್ರರ ಕೃತ್ಯ ಇರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಘಟನೆ ಬಳಿಕ ಎಲ್ಲಾ ಆರೋಗ್ಯ ಕಾರ್ಯಕರ್ತರು ಕರ್ತವ್ಯಕ್ಕೆ ಮರಳಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾಜ್ ಸೂಚಿಸಿದ್ದಾರೆ. ಘಟನೆ ಕುರಿತು ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದೊಂದು ದುರದೃಷ್ಟಕರ ಘಟನೆ ಎಂದಿದ್ದಾರೆ. ಸ್ಫೋಟದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಸಿಎಂಗೆ ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ.
