Home ರಾಷ್ಟ್ರೀಯ ಸೂಟ್‌ಕೇಸ್‌ನಲ್ಲಿ ಪತ್ತೆಯಾಯ್ತು ಹರ್ಯಾಣ ಕಾಂಗ್ರೆಸ್ ನ ಯುವ ಕಾರ್ಯಕರ್ತೆಯ ಶವ

ಸೂಟ್‌ಕೇಸ್‌ನಲ್ಲಿ ಪತ್ತೆಯಾಯ್ತು ಹರ್ಯಾಣ ಕಾಂಗ್ರೆಸ್ ನ ಯುವ ಕಾರ್ಯಕರ್ತೆಯ ಶವ

ಚಂಡಿಗಢ: ಹರ್ಯಾಣದ ರೋಹ್ಟಕ್-ದೆಹಲಿ ಹೆದ್ದಾರಿಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆಯಾದ ನಂತರ ಭಾರೀ ರಾಜಕೀಯ ಗದ್ದಲ ಭುಗಿಲೆದ್ದಿದೆ. ಮೃತ ಯುವತಿಯನ್ನು ರೋಹ್ಟಕ್‌ನ ಯುವ ಕಾಂಗ್ರೆಸ್‌ನ ಪದಾಧಿಕಾರಿ 23 ವರ್ಷದ ಹಿಮಾನಿ ನರ್ವಾಲ್ ಎಂದು ಕಾಂಗ್ರೆಸ್ ಗುರುತಿಸಿದೆ.

ಶುಕ್ರವಾರ ಸಂಪ್ಲಾ ಬಸ್ ನಿಲ್ದಾಣದ ಬಳಿ ನೀಲಿ ಬಣ್ಣದ ದೊಡ್ಡ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಈ ಕುರಿತು ಸಂಪ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕುತ್ತಿಗೆಗೆ ಸ್ಕಾರ್ಫ್ ಸುತ್ತಿಕೊಂಡ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಸೋನೆಪತ್‌ನ ಕಥುರಾ ಗ್ರಾಮದ ಹಿಮಾನಿ ನರ್ವಾಲ್ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು. ರೋಹ್ಟಕ್ ಸಂಸದ ದೀಪೇಂದರ್ ಹೂಡಾ ಸೇರಿದಂತೆ ವಿವಿಧ ನೇತಾರರ ರಾಜಕೀಯ ಕಾರ್ಯಕ್ರಮಗಳಲ್ಲಿ ನರ್ವಾಲ್ ಭಾಗಿಯಾಗಿದ್ದರು. ಆಕೆ ಕಾಂಗ್ರೆಸ್ ಸಭೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹರಿಯಾಣವಿ ಜಾನಪದ ಕಲಾವಿದರೊಂದಿಗೆ ಪ್ರದರ್ಶನ ನೀಡುತ್ತಿದ್ದರು.

ನರ್ವಾಲ್ ನ ಎಕ್ಸ್ ಖಾತೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಎಂದು ಉಲ್ಲೇಖಿಸಲಾಗಿದೆ. ಭಾರತ್ ಜೋಡೋ ಯಾತ್ರೆಯ ವೇಳೆ ನರ್ವಾಲ್ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆಗೆ ಕಾಣಿಸಿಕೊಂಡಿದ್ದರು. ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಭೂಪಿಂದರ್ ಹೂಡಾ ಮತ್ತು ದೀಪಿಂದರ್ ಹೂಡಾ ಅವರೊಂದಿಗೆ ಸಕ್ರಿಯರಾಗಿದ್ದರು ಎಂದು ಕಾಂಗ್ರೆಸ್ ಶಾಸಕ ಭರತ್ ಭೂಷಣ್ ಬಾತ್ರಾ ಹೇಳಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಹೇಳಿದೆ.

 

 
Previous articleಮಂಗಳನ ಅಂಗಳದಲ್ಲಿತ್ತು ಸಮುದ್ರತೀರ!! ಚೀನಾದ ರೋವರ್ ನಿಂದ ಪತ್ತೆಯಾಯ್ತು ಕೆಂಪು ಗ್ರಹದ ಪ್ರಾಚೀನ ಸಮುದ್ರದ ಅವಶೇಷ!
Next articleವೈಭವದೊಂದಿಗೆ ಸ್ವರ್ಣ ಗದ್ದುಗೆ ಏರಿದ ಕಾಪುದಪ್ಪೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿ