
ಗುವಾಹಟಿ: ಇದೇ ಮೊದಲ ಬಾರಿಗೆ ಅಸ್ಸಾಂನ ವಿಧಾನಸಭೆಯ ಅಧಿವೇಶನವು ಗುವಾಹಟಿಯ ಹೊರಗೆ ಬೊಡೋಲ್ಯಾಂಡ್ ನಲ್ಲಿ ನಡೆದು ಇತಿಹಾಸ ಸೃಷ್ಟಿಸಲಿದೆ. ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವು ಸೋಮವಾರ ಕೊಕ್ರಜಾರ್‌ನಲ್ಲಿರುವ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (BTC) ಅಸೆಂಬ್ಲಿಯಲ್ಲಿ ನಡೆಯಲಿದೆ.
ಬಜೆಟ್ ಅಧಿವೇಶನದ ಮೊದಲ ದಿನ ನಡೆಯಲಿರುವ ಕೊಕ್ರಜಾರ್‌ನಲ್ಲಿರುವ ಬಿಟಿಸಿ ವಿಧಾನಸಭೆಗೆ ಅಸ್ಸಾಂ ಸಚಿವರು ಮತ್ತು ರಾಜ್ಯದ ಶಾಸಕರನ್ನು ಹೊತ್ತ ಬಸ್‌ಗಳು ಮುಂಜಾನೆಯೆ ಹೊರಟಿವೆ.
1985 ರಿಂದ 2020 ರವರೆಗೆ, ಬೋಡೋಲ್ಯಾಂಡ್ ಹಿಂಸೆಗೆ ಸಮಾನಾರ್ಥಕವಾಗಿತ್ತು. ಒಂದು ಕಾಲದಲ್ಲಿ ಬೋಡೋಲ್ಯಾಂಡ್ ಬಂಡಾಯ, ಪ್ರತ್ಯೇಕತಾವಾದಿ ಬೇಡಿಕೆಗಳು ಮತ್ತು ಅಶಾಂತಿಯಿಂದ ಕೂಡಿತ್ತು. ಸುಮಾರು 35 ವರ್ಷಗಳಿಂದ ಅಸ್ಸಾಂನ ಯಾವುದೇ ಮುಖ್ಯಮಂತ್ರಿಗಳು, ಸಚಿವರು ಅಥವಾ ರಾಜಕೀಯ ನಾಯಕರು ಬೋಡೋಲ್ಯಾಂಡ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಧೈರ್ಯ ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೋಡೋಲ್ಯಾಂಡ್ ಯುಪಿಪಿಎಲ್ ಅಧ್ಯಕ್ಷ ಪ್ರಮೋದ್ ಬೊರೊ ಅವರ ಮುತುವರ್ಜಿಯಿಂದ 2020 ರಲ್ಲಿ ಶಾಂತಿ ಒಪ್ಪಂದ ನಡೆದು ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಈ ಒಪ್ಪಂದದಿಂದ ಅಸ್ಸಾಂನೊಳಗೆ ಸ್ವಾಯತ್ತ ಪ್ರದೇಶವಾದ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ರಚನೆಯಾಯಿತು. ಇದರಿಂದ ಸದಾ ಬಂಡಾಯ ನಡೆಯುತ್ತಿದ್ದ ಪ್ರದೇಶದಲ್ಲಿ ಶಾಂತಿ ನೆಲೆಸಿ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು.
ಇದೀಗ ಇದೇ ಮೊದಲ ಬಾರಿಗೆ ಬೋಡೋಲ್ಯಾಂಡ್ ನಲ್ಲಿ ಅಧಿವೇಶನವನ್ನು ನಡೆಸುತ್ತಿರುವುದು ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳಲ್ಲಿ ಹರ್ಷ ತಂದಿದೆ.
