
ಲಖನೌ: ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಬುಧವಾರದಂದು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 85 ವರ್ಷದ ಸತ್ಯೇಂದ್ರ ದಾಸ್ ಅವರನ್ನು ಫೆಬ್ರುವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಶ್ರೀರಾಮನ ಪರಮ ಭಕ್ತ, ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ಕುಮಾರ್ ದಾಸ್ ಜಿ ಮಹಾರಾಜ್ ಅವರ ನಿಧನವು ಅತ್ಯಂತ ದುಃಖಕರ ಮತ್ತು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸತ್ಯೇಂದ್ರ ದಾಸ್ ಅವರ ನಿಧನಕ್ಕೆ ದೇಶವ್ಯಾಪಿ ಗಣ್ಯರು ಮತ್ತು ಭಕ್ತರು ಸಂತಾಪ ಸೂಚಿಸಿದ್ದಾರೆ.
