
ದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ. ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು 4,025 ಮತಗಳಿಂದ ಸೋಲಿಸಿದ್ದಾರೆ. ಎಂಟನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಕೇಜ್ರಿವಾಲ್ ಅವರ ಮತಗಳ ಸಂಖ್ಯೆ 18,097 ಆಗಿದ್ದರೆ ವರ್ಮಾ 19,267 ಮತಗಳನ್ನು ಹೊಂದಿದ್ದಾರೆ.
ಮಧ್ಯಾಹ್ನ 12:45 ರವರೆಗಿನ ಮತಎಣಿಕೆಯಲ್ಲಿ ಭಾಜಪಾ ಪಕ್ಷವು 48 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, 27 ವರ್ಷಗಳ ವನವಾಸಕ್ಕೆ ಮುಕ್ತಿ ದೊರೆಯಲಿದೆಯೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಮಧ್ಯೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿತ್ತು. ಈ ಬಾರಿ ದೆಹಲಿಯ ಮತದಾರ ಯಾರ ಕಡೆಗೆ ವಾಲುತ್ತಾನೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಆದಾಗ್ಯೂ, ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ದೆಹಲಿಯಲ್ಲಿ ಕಮಲ ಅರಳುವುದು ನಿಶ್ಚಿತ ಎನ್ನುವ ಬಗ್ಗೆ ಸೂಚನೆ ನೀಡಿದ್ದವು.
ಕಳೆದ ಲೋಕಸಭಾ ಹಾಗೂ ಜಾರ್ಖಂಡ್, ಹರಿಯಾಣಾ ಮತ್ತು ಮಹಾರಾಷ್ಟ್ರಗಳ ವಿಧಾನಸಭಾ ಚುನಾವಣೆಗಳಲ್ಲಿ ಸಮೀಕ್ಷೆಗಳು ವಾಸ್ತವದಿಂದ ದೂರವಾಗಿದ್ದವು. ಸಮೀಕ್ಷೆಗಳ ಮೇಲಿನ ಎಲ್ಲರ ನಿರೀಕ್ಷೆಗಳು ಸುಳ್ಳಾಗಿದ್ದರಿಂದ ದೆಹಲಿ ಚುನಾವಣೆಯ ಸಮೀಕ್ಷೆಗಳನ್ನು ಯಥಾವತ್ತಾಗಿ ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದರೆ ಸಮೀಕ್ಷೆಗಳಿಗೆ ಅತ್ಯಂತ ಸಮೀಪದ ಅಂಕಿ ಸಂಖ್ಯೆಗಳು ಇದೀಗ ಮುನ್ನೆಲೆಗೆ ಬರುತ್ತಿವೆ.
ಎಲ್ಲಾ 70 ಸ್ಥಾನಗಳಲ್ಲಿ ಭಾಜಪಾವು 48 ಸ್ಥಾನಗಳೊಂದಿಗೆ ಬಹುಮತದತ್ತ ದಾಪುಗಾಲು ಹಾಕುತ್ತಿದ್ದರೆ, ಆಪ್ ಪಕ್ಷವು 22 ಸ್ಥಾನಗಳಲ್ಲಿ ಮುನ್ನಡೆಯುತ್ತಿದೆ. ಇದೀಗ ಎಂಟನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಭಾಜಪಾ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಭಾಜಪಾಗೆ ಶೇ.47.02ರಷ್ಟು ಮತಗಳು ಬಿದ್ದಿದ್ದರೆ, ಆಪ್ ಗೆ ಶೇ.43.17ರಷ್ಟು ಮತ ದೊರಕಿದೆ. ಈ ಅಂಕಿಗಳು ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇದೆ ಎನ್ನುವುದನ್ನು ಸೂಚಿಸುತ್ತಿದೆ. ಸಂಜೆವರೆಗೆ ಸ್ಪಷ್ಟ ಚಿತ್ರಣ ದೊರಕಲಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವುದು ಸ್ಪಷ್ಟವಾಗಲಿದೆ.
ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು ಹೀನಾಯ ಸೋಲನ್ನು ಅನುಭವಿಸುತ್ತಿರುವುದು ಮಾತ್ರ ಸ್ಪಷ್ಟವಾಗಿ ಗೋಚರವಾಗುತ್ತಿದೆ.
