ಭೋಪಾಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವನ್ನು ಆಚರಿಸುತ್ತಿದ್ದ ಸಮಯ ಮಧ್ಯಪ್ರದೇಶದ ಮಹುನ ಜಾಮಾ ಮಸೀದಿ ಬಳಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು.
ಭಾರತದ ಗೆಲುವನ್ನು ಆಚರಿಸುತ್ತಿದ್ದ ಗುಂಪು ಮಹುನ ಜಾಮಾ ಮಸೀದಿ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಸುತ್ತಮುತ್ತಲಿನ ಕೆಲವು ವ್ಯಕ್ತಿಗಳು ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಇದು ಎರಡೂ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಸಮಯದಲ್ಲಿ ಹಲವಾರು ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ದುಷ್ಕರ್ಮಿಗಳು ಎರಡು ವಾಹನ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿದರು.
ಸ್ಥಳೀಯರ ಪ್ರಕಾರ, ವಿಜಯೋತ್ಸವದ ಮೆರವಣಿಗೆ ಜಾಮಾ ಮಸೀದಿ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ, ಸಮುದಾಯ ವಿಶೇಷವೊಂದರ ವ್ಯಕ್ತಿಗಳ ದೊಡ್ಡ ಗುಂಪು ಮೆರವಣಿಗೆ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿತು ಮತ್ತು ಇದು ಘರ್ಷಣೆಗೆ ಕಾರಣವಾಯಿತು. ವಿಜಯೋತ್ಸವ ನಡೆಸುತ್ತಿದ್ದವರು ಬೈಕ್ ಗಳನ್ನು ಅಲ್ಲೇ ಬಿಟ್ಟು ಹೋಗುವಂತಾಯಿತು. ಹಿಂಸಾಚಾರದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಇಂದೋರ್ ಗ್ರಾಮೀಣ ಮತ್ತು ಇಂದೋರ್ ನಗರದಿಂದ ಭಾರೀ ಪೊಲೀಸ್ ಪಡೆಗಳನ್ನು ಪ್ರದೇಶದಲ್ಲಿ ನಿಯೋಜಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಸೇನಾ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.
