ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹ ತೂಕದ ಬಗ್ಗೆ ಕುಹಕವಾಡಿದ ಮತ್ತು ರೋಹಿತ್ ಅನ್ನು ಭಾರತದ ಇತಿಹಾಸದ “ಅತ್ಯಂತ ಅಪ್ರಭಾವಶಾಲಿ” ನಾಯಕ ಎಂದು ಟೀಕಿಸಿರುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ವಿರುದ್ದ ನೆಟ್ಟಿಗರು ಕಿಡಿಕಾರಿದ್ದು, ವಿವಾದವನ್ನು ತಣ್ಣಗಾಗಿಸಲು ಕಾಂಗ್ರೆಸ್ ಮಧ್ಯಪ್ರವೇಶಿಸಿದೆ.
ಭಾರತೀಯ ತಂಡದ ನಾಯಕನ ಬಗ್ಗೆ ಶಮಾ ಮೊಹಮ್ಮದ್ ಮಾಡಿದ ಹೇಳಿಕೆಯು ಪಕ್ಷವನ್ನು ಮುಜಗರಕ್ಕೀಡು ಮಾಡಿದೆ. ವಿವಾದ ಬಳಿಕ ಕಾಂಗ್ರೆಸ್ ಮಧ್ಯಪ್ರವೇಶಿಸಿದ್ದು, ಇದು ಆಕೆಯ ವೈಯಕ್ತಿಕ ಹೇಳಿಕೆಯಾಗಿದ್ದು, ಇದು ಪಕ್ಷದ ಮನಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂದು ಪಕ್ಷದ ಅಧಿಕೃತ ವಕ್ತಾರರು ಹೇಳಿಕೊಂಡಿದ್ದಾರೆ. ಶಮಾ ತನ್ನ ಪೋಸ್ಟ್ ಅನ್ನು ಅಳಿಸುವಂತೆ ಆಕೆಗೆ ತಾಕೀತು ಮಾಡಲಾಗಿದೆ. ಬಳಿಕ ಪೋಸ್ಟ್ ಅನ್ನು ಅಳಿಸಲಾಗಿದೆ.
“ರೋಹಿತ್ ಶರ್ಮಾ ಕ್ರೀಡಾಪಟುವಾಗಲಿಕ್ಕೆ ತುಂಬಾ ದಪ್ಪವಾಗಿದ್ದಾರೆ! ಅವರು ತೂಕ ಇಳಿಸಿಕೊಳ್ಳಬೇಕು! ಮತ್ತು ಸಹಜವಾಗಿ, ಭಾರತ ಕಂಡ ಅತ್ಯಂತ ಅಪ್ರಭಾವಶಾಲಿ ನಾಯಕ!” ಎಂದು ಎಕ್ಸ್ ಪೋಸ್ಟ್ ನಲ್ಲಿ ಶಮಾ ಬರೆದುಕೊಂಡಿದ್ದರು. ಇದರಿಂದ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದರು ಮತ್ತು ಶಮಾ ಹೇಳಿಕೆಯನ್ನು ಖಂಡಿಸಿದ್ದರು.
