ಚಂಡೀಗಢ: ಮಾರ್ಚ್ 1 ರಂದು ರೋಹ್ಟಕ್‌ನ ಹೆದ್ದಾರಿಯ ಬಳಿ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಹರಿಯಾಣ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿಯು ಆಕೆಯ ಪ್ರಿಯಕರನಾಗಿದ್ದು, ನರ್ವಾಲ್ ನನ್ನು ಆತನ ಮನೆಯಲ್ಲಿ ಹತ್ಯೆ ಮಾಡಿದ್ದಾನೆ. ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಝೀ ನ್ಯೂಸ್ ವರದಿ ಹೇಳಿದೆ.
ನರ್ವಾಲ್ ನ ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ಆರೋಪಿಯ ಬಳಿಯಿಂದ ಪೊಲೀಸರು ಪತ್ತೆ ಮಾಡಿದ್ದಾರೆ. ಆತ ನರ್ವಾಲ್ ನೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದ ಮತ್ತು ನರ್ವಾಲ್ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದುದಾಗಿ ಆತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಹಿಮಾನಿಯ ತಾಯಿ ಸವಿತಾ ದೇವಿ ತನ್ನ ಮಗಳ ಸಾವಿನ ಹಿಂದೆ ಪಕ್ಷದವರ ಕೈವಾಡ ಇದೆ ಎಂದು ದೂರಿದ್ದಾರೆ. ಸವಿತಾ ದೇವಿ ಪ್ರಕಾರ, ಫೆಬ್ರವರಿ 28 ರಂದು ಮಗಳು ಮನೆಯಲ್ಲಿಯೇ ಇದ್ದಳು ಮತ್ತು ಬೆದರಿಕೆ ಎದುರಿಸುತ್ತಿದ್ದಳು. ರಾಹುಲ್ ಗಾಂಧಿ ಮತ್ತು ಹೂಡಾ ಕುಟುಂಬ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಹಿಮಾನಿಯ ನಿಕಟ ಸಂಬಂಧವು ಕೆಲವು ವ್ಯಕ್ತಿಗಳಲ್ಲಿ ಅಸೂಯೆಯನ್ನು ಹುಟ್ಟುಹಾಕಿತ್ತು ಎಂದು ಅವರು ಆರೋಪಿಸಿದ್ದಾರೆ.
“ಚುನಾವಣೆ ಮತ್ತು ಪಕ್ಷ ನನ್ನ ಮಗಳ ಜೀವವನ್ನೇ ತೆಗೆದುಕೊಂಡಿತು. ಈ ಕಾರಣದಿಂದಾಗಿ, ಅವಳು ಕೆಲವು ಶತ್ರುಗಳನ್ನು ಹೊಂದಿದ್ದಳು. ಇವರು (ಅಪರಾಧಿಗಳು) ಪಕ್ಷದವರೂ ಆಗಿರಬಹುದು, ಆಕೆಯ ಸ್ನೇಹಿತರೂ ಆಗಿರಬಹುದು… ಫೆಬ್ರವರಿ 28 ರಂದು ಆಕೆ ಮನೆಯಲ್ಲಿದ್ದಳು, ನಮಗೆ ಪೊಲೀಸ್ ಠಾಣೆಯಿಂದ (ಘಟನೆಯ ಬಗ್ಗೆ) ಫೋನ್ ಕರೆ ಬಂದಿದೆ. ನನ್ನ ಮಗಳು ಆಶಾ ಹೂಡಾ (ಭೂಪಿಂದರ್ ಸಿಂಗ್ ಹೂಡಾ ಅವರ ಪತ್ನಿ) ಅವರಿಗೆ ತುಂಬಾ ಹತ್ತಿರವಾಗಿದ್ದಳು. ಆಕೆಗೆ ನ್ಯಾಯ ಸಿಗುವವರೆಗೂ ನಾನು ಅವಳ ಅಂತ್ಯಕ್ರಿಯೆಯನ್ನು ಮಾಡುವುದಿಲ್ಲ” ಎಂದು ಸವಿತಾ ದೇವಿ ಹೇಳಿದ್ದಾರೆ.
ಹಿಮಾನಿ ನರ್ವಾಲ್ ಹತ್ಯೆಯ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ಕಾರ್ಯಪಡೆಯನ್ನು ರಚಿಸಿ ಎಲ್ಲ ಕೋನಗಳಿಂದಲೂ ಘಟನೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
