
ಮೋರಿಗಾಂವ್: ಇಂದು ಬೆಳಗಿನ ಜಾವ 2:25 ಕ್ಕೆ ಅಸ್ಸಾಂನ ಮೋರಿಗಾಂವ್‌ನಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪದ ಕೇಂದ್ರ ಬಿಂದು ಮೋರಿಗಾಂವ್ ಆಗಿತ್ತು. ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ ಮತ್ತು ದೆಹಲಿ-ಎನ್‌ಸಿಆರ್ ವರೆಗೆ ಕಂಪನದ ಅನುಭವವಾಗಿದೆ.
ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೂಕಂಪದ ಪರಿಣಾಮ ಕಂಡುಬಂದಿದೆ. ಗುವಾಹಟಿ, ನಾಗಾಂವ್ ಮತ್ತು ತೇಜ್‌ಪುರದಲ್ಲಿ ಜನರು ಕಂಪನದ ಅನುಭವಕ್ಕೆ ಒಳಗಾದರು. “ನಡುಕ ಎಷ್ಟು ಪ್ರಬಲವಾಗಿತ್ತೆಂದರೆ ನಮಗೆ ಎಚ್ಚರವಾದಾಗ ಫ್ಯಾನ್‌ಗಳು ಮತ್ತು ಕಿಟಕಿಗಳು ಅಲುಗಾಡಲು ಪ್ರಾರಂಭಿಸಿದವು” ಎಂದು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಇನ್ನು ಭೂಕಂಪನದಿಂದ ಯಾವುದೇ ದೊಡ್ಡ ನಷ್ಟವಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಳೆದೊಂದು ವಾರದಿಂದ ಉತ್ತರ ಭಾರತದಲ್ಲಿ ಭೂಕಂಪನದ ಘಟನೆಗಳು ವರದಿಯಾಗುತ್ತಿವೆ. ದೆಹಲಿ, ಬಂಗಾಳ ಕೊಲ್ಲಿ ಬಳಿಕ ಇದೀಗ ಅಸ್ಸಾಂನಲ್ಲಿಯೂ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಮನೆಮಾಡಿದೆ.
