ವಿಶಾಖಪಟ್ಟಣಂ: ಆಂಧ್ರಪ್ರದೇಶದ ಕಡಪದಲ್ಲಿರುವ ಶ್ರೀಲಂಕಾಮಲ್ಲೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯು ಮೂರು ಶಿಲಾಶ್ರಯಗಳು ಮತ್ತು ಶಿಲಾ ವರ್ಣಚಿತ್ರಗಳ ಜೊತೆಗೆ, 800 ರಿಂದ 2000 ವರ್ಷಗಳ ಹಿಂದಿನ 30 ಶಾಸನಗಳನ್ನು ಸಂಶೋಧನೆ ಮಾಡಿದೆ.
ಎ.ಎಸ್.ಐ ಪ್ರಕಾರ, ಮೂರು ಶಿಲಾಶ್ರಯಗಳಲ್ಲಿ ಒಂದರಲ್ಲಿ ಮಾನವರ, ಪ್ರಾಣಿಗಳ ಮತ್ತು ಜ್ಯಾಮಿತೀಯ ವಿನ್ಯಾಸಗಳ ಸುಂದರವಾದ ಪ್ರಾಗೈತಿಹಾಸಿಕ ಕಲಾಕೃತಿಗಳಿವೆ. ಈ ವರ್ಣಚಿತ್ರಗಳನ್ನು ಮೆಗಾಲಿಥಿಕ್ (ಲೋಹ ಯುಗ) ಮತ್ತು ಆರಂಭಿಕ ಐತಿಹಾಸಿಕ ಅವಧಿಗಳಲ್ಲಿ (2500 BCE- 2 ನೇ ಶತಮಾನ) ರೆಡ್ ಓಚರ್, ಕಾಯೋಲಿನ್, ಪ್ರಾಣಿಗಳ ಕೊಬ್ಬು ಮತ್ತು ಪುಡಿಮಾಡಿದ ಮೂಳೆಗಳಿಂದ ರಚಿಸಲಾಗಿದೆ.
ಇಲಾಖೆಯ ಆರು ಸದಸ್ಯರ ತಂಡವು 30 ಶಿಲಾ ಶಾಸನಗಳನ್ನೂ ಪತ್ತೆ ಮಾಡಿದೆ. ಲಂಕಾಮಾಲಾ ಪ್ರದೇಶವು ಉತ್ತರ ಭಾರತದಿಂದ ನಿಯಮಿತವಾಗಿ ಭಕ್ತರು ಭೇಟಿ ನೀಡುವ ಪ್ರಮುಖ ಶೈವ ಯಾತ್ರಾ ಕೇಂದ್ರವಾಗಿತ್ತು ಎಂದು ಇಲಾಖೆ ಹೇಳಿದೆ.
ಈ ಸಮೀಕ್ಷೆಯನ್ನು ಫೆಬ್ರವರಿ 27 ರಿಂದ ಮಾರ್ಚ್ 1 ರ ನಡುವೆ ನಡೆಸಲಾಗಿದೆ. ನಿತ್ಯಪೂಜಕೋನ, ಅಕ್ಕದೇವತಾಳ ಕೊಂಡ, ಮತ್ತು ಬಂಡಿಗಣಿ ಚೆಲ್ಲ ಪ್ರದೇಶಗಳಲ್ಲಿ ಶಾಸನಗಳು ಪತ್ತೆಯಾಗಿದ್ದು, ತಂಡದ ನಾಯಕ ಕೆ ಮುನಿರತ್ನಂ ಪ್ರಕಾರ ಶಾಸನಗಳನ್ನು ಬ್ರಾಹ್ಮಿ (4 ನೇ ಶತಮಾನ), ಚೆಲ್ (6 ನೇ ಶತಮಾನ), ನಾಗರಿ ಮತ್ತು ತೆಲುಗು ಅಕ್ಷರಗಳಲ್ಲಿ ಬರೆಯಲಾಗಿದೆ.
“ಇದು ಎಎಸ್ಐ ಇತಿಹಾಸದಲ್ಲಿ ಒಂದು ಹೆಗ್ಗುರುತಿನ ಆವಿಷ್ಕಾರವಾಗಿದೆ. ಉತ್ತರ ಭಾರತೀಯರು ಸಹ ಬಳಸುತ್ತಿದ್ದ ಯಾತ್ರಾ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. 4 ನೇ ಶತಮಾನದಲ್ಲಿ ಶೈವ ಪ್ರದೇಶದ ಯಾತ್ರಾ ಕೇಂದ್ರವು ಇಲ್ಲಿಂದ ಶ್ರೀಶೈಲಕ್ಕೆ ಹೇಗೆ ಸ್ಥಳಾಂತರಗೊಂಡಿತು ಎಂಬುದನ್ನು ಇದು ತೋರಿಸುತ್ತದೆ” ಎಂದು ಕೆ ಮುನಿರತ್ನಂ ಹೇಳಿದ್ದಾರೆ.
