Home ರಾಷ್ಟ್ರೀಯ ICC Champions Trophy: ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 4ನೇ ನಾಯಕ ರೋಹಿತ್ ಶರ್ಮಾ

ICC Champions Trophy: ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 4ನೇ ನಾಯಕ ರೋಹಿತ್ ಶರ್ಮಾ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, 83 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 76 ರನ್ ಕಲೆ ಹಾಕಿದರು.

ನಿಧಾನಗತಿಯ ಪಿಚ್ ನಲ್ಲಿ ಭಾರತದ ದಿಢೀರ್ ಕುಸಿತವನ್ನು ತಡೆಯಲು ಸಮಯೋಚಿತ ಬ್ಯಾಟಿಂಗ್ ನಿರ್ವಹಿಸಿ ತಂಡಕ್ಕೆ ನೆರವಾದ ಕಾರಣಕ್ಕೆ ರೋಹಿತ್ ಶರ್ಮಾ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಮೂಲಕ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಅಪರೂಪದ ದಾಖಲೆ ಬರೆದುಕೊಂಡಿದ್ದು, ಐಸಿಸಿಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಭಾಜನರಾದ 4ನೇ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಹಿಂದೆ 1975ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ಲೈವ್ ಲಾಯ್ಡ್, 2003 ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್, 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂದಿನ ಭಾರತ ತಂಡದ ನಾಯಕ ಎಂಎಸ್ ಧೋನಿ ಮಾತ್ರ ಫೈನಲ್ ನಲ್ಲಿ ಪಂದ್ಯಶ್ರೇಷ್ಛ ಪ್ರಶಸ್ತಿಗೆ ಅರ್ಹರಾಗಿದ್ದರು. ಇದೀಗ ಈ ಪಟ್ಟಿಗೆ ರೋಹಿತ್ ಶರ್ಮಾ ಸೇರಿದ್ದಾರೆ.

 

 

 
Previous articleರನ್ಯಾ ರಾವ್ ಗೆ ಪ್ರಭಾವಿ ರಾಜಕಾರಣಿ ನಂಟು? ಕೆಐಎಡಿಬಿ ನಿಂದ 12 ಎಕರೆ ಭೂಮಿ ಮಂಜೂರು!
Next articleರಶ್ಮಿಕಾ ರಾಜಕಾರಣ: ಕಾಂಗ್ರೆಸ್ ಶಾಸಕನ ಹೇಳಿಕೆ ಖಂಡಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ