
ನವದೆಹಲಿ: ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಂತಸ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಪ್ರಪಂಚದ ಟೆಕ್ ದಿಗ್ಗಜ ಎಲೋನ್ ಮಸ್ಕ್ ನ (Elon Musk) ಟೆಸ್ಲಾ ಕಂಪನಿಯು (Tesla.inc) ಭಾರತದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಸಜ್ಜಾಗಿದೆ. ಇದರೊಂದಿದೆ ಭಾರತದ ಇವಿ ಮಾರುಕಟ್ಟೆಗೆ ಲಗ್ಗೆ ಇಡಲು ಟೆಸ್ಲಾ ಸಜ್ಜಾಗಿದೆ ಎನ್ನಲಾಗುತ್ತಿದೆ. ಅಮೇರಿಕಾದಲ್ಲಿ ಪ್ರಧಾನಿ ಮೋದಿ ಮತ್ತು ಮಸ್ಕ್ ಭೇಟಿ ಬಳಿಕ ಈ ಸುದ್ದಿ ಬಂದಿದೆ.
ತನ್ನ ಲಿಂಕ್ಡ್ಇನ್ ಪುಟದಲ್ಲಿ ಸೋಮವಾರ ಜಾಹೀರಾತು ನೀಡಿರುವ ಎಲೆಕ್ಟ್ರಿಕ್-ವಾಹನ ತಯಾರಕ ಟೆಸ್ಲಾ ಕಂಪನಿಯು 13 ವಿವಿಧ ವಿಭಾಗಗಳಿಗೆ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಇದರಲ್ಲಿ ಫಂಟ್-ಎಂಡ್ ಮತ್ತು ಬ್ಯಾಕ್-ಎಂಡ್ ಉದ್ಯೋಗಗಳು ಸೇರಿವೆ. ಸೇವಾ ತಂತ್ರಜ್ಞ ಮತ್ತು ವಿವಿಧ ಸಲಹಾ ಪಾತ್ರಗಳನ್ನು ಒಳಗೊಂಡಂತೆ ಕನಿಷ್ಠ ಐದು ಹುದ್ದೆಗಳು ಮುಂಬೈ ಮತ್ತು ದೆಹಲಿ ಎರಡರಲ್ಲೂ ಲಭ್ಯವಿದ್ದರೆ, ಗ್ರಾಹಕ ಸಮಾಲೋಚಕ ವ್ಯವಸ್ಥಾಪಕ ಮತ್ತು ವಿತರಣೆ ಕಾರ್ಯಾಚರಣೆ ತಜ್ಞರಂತಹ ಹುದ್ದೆಗಳು ಮುಂಬೈಗೆ ಸೀಮಿತವಾಗಿವೆ.
ಟೆಸ್ಲಾವು ಕಳೆದ ಹಲವು ವರ್ಷಗಳಿಂದ ಭಾರತವನ್ನು ಪ್ರವೇಶಿಸಲು ಎದುರು ನೋಡುತ್ತಿದೆ. ಆದರೆ ಭಾರತದ ಅತಿಯಾದ ಆಮದು ಸುಂಕವು ಟೆಸ್ಲಾದ ಪ್ರವೇಶವನ್ನು ತಡೆಹಿಡಿದಿದ್ದವು. ಭಾರತವು ಈಗ $40,000 ಕ್ಕಿಂತ ಹೆಚ್ಚಿನ ಬೆಲೆಯ ಉನ್ನತ-ಮಟ್ಟದ ಕಾರುಗಳ ಮೇಲಿನ ಮೂಲ ಆಮದು ಸುಂಕವನ್ನು 110% ರಿಂದ 70% ಕ್ಕೆ ಇಳಿಸಿದ್ದು ಇದರ ಬೆನ್ನಿಗೇ ಕಂಪನಿಯು ಅಭ್ಯರ್ಥಿಗಳಿಗಾಗಿ ಜಾಹೀರಾತು ನೀಡಿದೆ.
