
ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಘಟನೆಯ ವೇಳೆ ಎನ್‌ಐಸಿಯುನಲ್ಲಿ ಒಟ್ಟು 54 ಮಕ್ಕಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಹೊಗೆ ತುಂಬಿದ ವಾರ್ಡ್‌ನ ಕಿಟಕಿಗಳನ್ನು ಒಡೆದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಕ್ಕಳನ್ನು ಸ್ಥಳಾಂತರಿಸಿದ್ದಾರೆ.
ಮಕ್ಕಳ ವಾರ್ಡ್‌ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಕರಣದ ತನಿಖೆಗೆ ಕ್ರಮವಹಿಸಲಾಗಿದೆ.
ಬಲಿಯಾದವರ ಪೈಕಿ ಏಳು ಮಕ್ಕಳನ್ನು ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.
