Home ರಾಷ್ಟ್ರೀಯ ಪರೀಕ್ಷಾ ಅಕ್ರಮ ತಡೆಗಟ್ಟಲು ಹೊಸ ಕಾನೂನು! ಅಧಿಸೂಚನೆ ಹೊರಡಿಸಿದ ಸರ್ಕಾರ

ಪರೀಕ್ಷಾ ಅಕ್ರಮ ತಡೆಗಟ್ಟಲು ಹೊಸ ಕಾನೂನು! ಅಧಿಸೂಚನೆ ಹೊರಡಿಸಿದ ಸರ್ಕಾರ

ಮೊನ್ನೆಯಷ್ಟೇ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಶೀಘ್ರದಲ್ಲೇ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕೇಳಿ ಬಂದ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಕ್ರಮಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಸಾರ್ವಜನಿಕ ಪರೀಕ್ಷೆಗಳ ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ ಕಾಯಿದೆ-2024 ಕಾನೂನು ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ‌.

ಕಠಿಣ ಕ್ರಮ ಜಾರಿ
ಇಂದು ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ವಿಚಾರ ಹೆಚ್ಚಾಗಿ ಕಂಡು ಬರುತ್ತಿದ್ದು, ಇಂತವರ ವಿರುದ್ಧ ಇನ್ನು ಮುಂದೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ. ಪರೀಕ್ಷಾರ್ಥಿಗಳ ಸೀಟ್‌ ನಿಗದಿಪಡಿಸುವಲ್ಲಿ ಅಕ್ರಮ, ಉದ್ದೇಶಪೂರ್ವಕ ನಿಯಮ ಉಲ್ಲಂಘಿಸುವುದನ್ನು ಪರೀಕ್ಷಾ ಅಕ್ರಮವೆಂದು ಹೊಸ ಕಾಯಿದೆಯಡಿ ಪರಿಗಣಿಸಿ ಈ ಕ್ರಮ ಜಾರಿ ಮಾಡಲಾಗುತ್ತದೆ.

ಯಾವ್ಯಾವ ಕ್ರಮ ಜಾರಿ

*ಹೊಸ ಕಾನೂನು ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ತಡೆಯಲು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಇರಲಿದೆ‌.

*ಈ ವಿಚಾರವಾಗಿ ನಿರಂತರವಾಗಿ ಅಪರಾಧಗಳಲ್ಲಿ ತೊಡಗಿರುವವರಿಗೆ ಐದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲಿದೆ.

*ಹಾಗೆಯೇ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು, ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಸೇರಿದಂತೆ ಪರೀಕ್ಷಾ ಅಕ್ರಮ ಅಪರಾಧವನ್ನು ಮಾಡಿದರೆ ಅವರಿಗೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಅಥವಾ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

*ಒಂದು ವೇಳೆ ಪೇಪರ್ ಸೋರಿಕೆ ಅಪರಾಧದಲ್ಲಿ ಪರೀಕ್ಷಾ ಕೇಂದ್ರಗಳು ಭಾಗಿಯಾಗಿದರೆ ಆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕುವ ಹಕ್ಕು ಇದೆ. ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಕೀಗಳನ್ನು ಸೋರಿಕೆ ಮಾಡುವುದು, ಅಭ್ಯರ್ಥಿಗಳಿಗೆ ಸಹಾಯ ಮಾಡುವುದು, ಕಂಪ್ಯೂಟರ್ ನೆಟ್‌ವರ್ಕ್‌ಗಳ ದುರ್ಬಳಕೆ, ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡು‌‌ವುದು ಇತ್ಯಾದಿಯನ್ನು ಪರೀಕ್ಷಾ ಅಕ್ರಮವೆಂದು ಹೊಸ ಕಾಯಿದೆಯಡಿ ಪರಿಗಣನೆ ಮಾಡಲಾಗುತ್ತದೆ.

ಯಾವಾಗ ಜಾರಿ?

ಈ ನಿಯಮವು ಜೂ.21 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಸಾಕಷ್ಟು ಬಿಗಿ ಮಾಡಲಾಗಿದ್ದು, ಯಾವುದೇ ಅಕ್ರಮ ಮಾಡದಂತೆ, ಮಾಡಿದರೂ ಕಠಿಣ ಶಿಕ್ಷೆ ನೀಡುವ ಮೂಲಕ‌ ಈ ನಿಯಮ ಜಾರಿ ಗೊಳಿಸಿದೆ.

 
Previous articleರೇಣುಕಾಸ್ವಾಮಿ ಕೊಲೆ ಕೇಸ್:‌ ನಟ ದರ್ಶನ್‌ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ..
Next articleರೈತ ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಡಿ ನಿಮಗೆ ಸಿಗಲಿದೆ 60 ರಿಂದ 80 ಸಾವಿರ ಮೊತ್ತ