
ಉಡುಪಿ: ಬೈಲೂರಿನ ಉಮಿಕಲ್ ಗುಡ್ಡದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿದ್ದ ಶಿಲ್ಪಿ ಕೃಷ್ಣ ನಾಯ್ಕ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಶಿಲ್ಪಿಯು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತತ್‌ಕ್ಷಣವೇ ತನಿಖೆ ಆರಂಭಿಸಿ ವಾರದೊಳಗೆ ನಕಲಿ ಮೂರ್ತಿಗೆ ಬಳಸಿದ ಪರಿಕರಗಳು ಎಲ್ಲಿವೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರದ ತನಿಖೆಯನ್ನು ರಾಜ್ಯ ಸರಕಾರ ಈಗಾಗಲೇ ಸಿಐಡಿಗೆ ಒಪ್ಪಿಸಿದೆ. ಸದ್ಯ ಸಿಐಡಿ ತನಿಖೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದೆ.
ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಇನ್ನೊಂದು ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ಚುರುಕುಗೊಳಿಸಬೇಕೆಂದು ಆಗ್ರಹಿಸಿದರು.
ನಕಲಿ ಮೂರ್ತಿಯನ್ನು ಕಂಚಿನ ಮೂರ್ತಿ ಎಂದು ನಂಬಿಸಿ, ಜನರನ್ನು ಮೋಸಗೊಳಿಸಿದ ಶಾಸಕ ಸುನಿಲ್ ಕುಮಾರ್ ಅವರು ಎಂಎಲ್‌ಎ ಸ್ಥಾನಕ್ಕೆ ತತ್‌ಕ್ಷಣವೇ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಹೇಳಿದರು.
