
ಸೇರಿ ಬೇಗವಾನ್: ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಐತಿಹಾಸಿಕ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಲ್ಲಿಗೆ ಆಗಮಿಸುವ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರ ತಂದೆಯ ಹೆಸರಿನಲ್ಲಿ ಈ ಮಸೀದಿಯನ್ನು 1958ರಲ್ಲಿ ನಿರ್ಮಿಸಲಾಯಿತು. ಸುಲ್ತಾನ್ ಸೈಫುದ್ದೀನ್ ಅವರನ್ನು ಆಧುನಿಕ ಬ್ರೂನಿಯ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ.
ಈ ಹಿಂದೆ 2016ರಲ್ಲಿ ಅಂದಿನ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಈ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದರು.
ಮೋದಿ ಅವರ ಭೇಟಿಯು ಮೇ 1984ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದಿಂದ ಮೊದಲ ಉನ್ನತ ಮಟ್ಟದ ಪ್ರವಾಸವಾಗಿದೆ. ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿರುವ ಭಾರತದ ಎರಡನೇ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
