ಮಂಗಳೂರು: ಶಾಲೆಯ ಮಕ್ಕಳ ಊಟದಿಂದ ಹಿಡಿದು ಪ್ರತಿಯೊಂದರಲ್ಲೂ ಸರಕಾರದ ಅವ್ಯವಸ್ಥೆ ಎದ್ದು ಕಾಣುತಿದ್ದು ಈಗ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರಿಗೆ ನೀಡಿದ ಸೀರೆಯ ಬಗ್ಗೆ ದೂರುಗಳು ಕೇಳಿಬರುತ್ತಿವೆ.
“ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ (ಐಸಿಡಿಎಸ್) 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರವಾಗಿ ಸೀರೆ ವಿತರಿಸಲಾಗಿತ್ತು.
ಸಮವಸ್ತ್ರವಾಗಿ ನೀಡಿದ ಹದಿನೈದು ದಿನಗಳಲ್ಲೇ ನೂಲು ಬಿಟ್ಟಿದ್ದು, ಇದು ತೀರಾ ಕಳಪೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿದೆ.
ಒಂದು ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡರಂತೆ ಒಟ್ಟು ನಾಲ್ಕು ಸೀರೆಗಳನ್ನು ವಿತರಿಸಲಾಗಿದೆ. ಮುಂದಿನ ಒಂದು ವರ್ಷದ ತನಕ ದಿನಂಪ್ರತಿ ಈ ಸೀರೆಯನ್ನು ಸಮವಸ್ತ್ರವನ್ನಾಗಿ ಬಳಸಲು ಸೂಚಿಸಲಾಗಿತ್ತು.
ಸೆ.15ರಂದು ಸೀರೆ ಬಂದಿದ್ದು, ಅ.2ರಿಂದ ಉಡುವಂತೆ ಸೂಚಿಸಲಾಗಿತ್ತು. ಸೀರೆ ಉಡಲು ಆರಂಭಿಸಿದ ಹದಿನೈದು ದಿನದಲ್ಲೇ ಸೀರೆಯ ಒಂದು ಭಾಗದಲ್ಲಿ ನೂಲು ಬಿಡಲು ಆರಂಭಿಸಿದೆ.
ಸೀರೆಗೆ ತಲಾ 400 ರೂ. ಬೆಲೆ ನಿಗದಿಯಾಗಿದೆ. ಆದರೆ ಗುಣಮಟ್ಟ ನೋಡುವಾಗ 100 ರೂ.ನ ಆಸುಪಾಸಿನಲ್ಲಿದೆ ಎನ್ನುತ್ತಾರೆ ಫಲಾನುಭವಿಗಳು.
ರಾಜ್ಯದಲ್ಲಿ 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರಿಗೆ ಸರಕಾರವೇ ನೇರವಾಗಿ ಸೀರೆ ವಿತರಿಸಿದೆ.
