
ಮಂಗಳೂರು: ವಿದ್ಯಾರ್ಥಿಗಳು ಭೌತಿಕ ಅಂಕಪಟ್ಟಿ ಸಿಗದೆ, “ಡಿಜಿಟಲ್’ ಅಂಕಪಟ್ಟಿ ಮಾತ್ರ ಲಭ್ಯವಾಗುತ್ತಿರುವುದರಿಂದ ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಅಲ್ಲದೆ ಅಂಕ, ಹೆಸರು ಮತ್ತಿತರ ಹಲವು ಅಂಶಗಳು ತಪ್ಪಾಗಿ ನಮೂದಾಗಿರುವುದು ಕಂಡು ಬಂದಿದೆ.
ಕೋರ್ಸ್ ಮುಗಿಸಿದ ಬಳಿಕ ಅಂಕಪಟ್ಟಿ ಸರಿಪಡಿಸುವುದೇ ವಿದ್ಯಾರ್ಥಿಗಳಿಗೆ ಬಲುದೊಡ್ಡ ತಲೆನೋವಾಗಿದ್ದು, ಪ್ರತೀ ಸೆಮಿಸ್ಟರ್‌ನಲ್ಲೂ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿದ್ದ ಕೆಲವು ವಿದ್ಯಾರ್ಥಿಗಳು ಈಗ ಅಂತಿಮ ಅಂಕಪಟ್ಟಿ ಡೌನ್‌ಲೋಡ್ ಮಾಡಿದರೆ ಅಂಕಗಳು ಗಾಬರಿ ಹುಟ್ಟಿಸುವಂತಿವೆ.
ಉನ್ನತ ಶಿಕ್ಷಣ ಇಲಾಖೆಯು 2021-22ರಲ್ಲಿ ಯುಯುಸಿಎಂಎಸ್ ಜಾರಿಗೆ ತಂದ ಬಳಿಕ ಪ್ರತೀ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿ ಪಡೆದ ಅಂಕವನ್ನು ಯುಯುಸಿಎಂಎಸ್‌ನಲ್ಲಿಯೇ ನಮೂದಿಸಲಾಗುತ್ತಿದೆ. ವಿದ್ಯಾರ್ಥಿ ಲಾಗಿನ್ ಮೂಲಕ ಪರೀಕ್ಷಾ ಸಂಖ್ಯೆ ನಮೂದಿಸಿ ಆಯಾ ವರ್ಷದ ಡಿಜಿಟಲ್ ಅಂಕಪಟ್ಟಿ ಪಡೆಯಬಹುದು.
ಉನ್ನತ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ಯುಯುಸಿಎಂಎಸ್ ತಂತ್ರಾಂಶದಲ್ಲಿ ಇರುವ ತಾಂತ್ರಿಕ ತೊಂದರೆಯಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯೇ 2 ವರ್ಷಗಳಿಂದ ಸಂಕಟ ಉಂಟುಮಾಡುತ್ತಿದೆ. ಕೆಲವು ಸೆಮಿಸ್ಟರ್‌ಗಳಲ್ಲಿ “ಅನುತ್ತೀರ್ಣ’ ಎಂದೂ ತೋರಿಸುತ್ತಿದೆ. ಅಂಕ, ಹೆಸರು, ಸಂಖ್ಯೆ ಇತ್ಯಾದಿ ಎಲ್ಲೆಡೆ ಸರಿ ಇರುವುದಕ್ಕಿಂತ ದೋಷಗಳೇ ಹೆಚ್ಚು ಎಂಬಂತಿದೆ.
