
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
ತಿರುಪತಿ, ಶಿರಡಿ ಕ್ಷೇತ್ರಗಳಲ್ಲಿ ಕ್ಯೂ ಕಾಂಪ್ಲೆಕ್ಸ್ ಮೂಲಕ ದೇವರ ದರ್ಶನ ಪಡೆಯುವಂತೆ ಇದೀಗ ಅದೇ ಮಾದರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಹಿಂಭಾಗದಲ್ಲಿ ಬರೋಬ್ಬರಿ 2,75,177 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕ್ಯೂ ಕಾಂಪ್ಲೆಕ್ಸ್ ತಲೆ ಎತ್ತಿದೆ. ಶ್ರೀ ಸಾನ್ನಿಧ್ಯ ಹೆಸರಿನ ಈ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೇ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು.
ಎರಡು ಅಂತಸ್ಥಿನಲ್ಲಿ ತಲಾ 8 ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12ಸಾವಿರ ಮಂದಿ ತಂಗಲು ಅವಕಾಶವಿದೆ. ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕ್ಯೂ ಕಾಂಪ್ಲೆಕ್ಸ್ ಪ್ರವೇಶಿಸುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮೆರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ. ಆರಂಭದಲ್ಲೆ ಸೇವಾ ರಶೀದಿ ಕೌಂಟರ್ ಇದ್ದು ಬಳಿಕ ಕೊಠಡಿಗೆ ಎಂಟ್ರಿ ನೀಡಲಾಗುತ್ತದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳಿವೆ.
ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದ 6-7 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.
ಭಕ್ತಾಧಿಗಳಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ಭವನ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ಪ್ರಸಾರವಾಗುತ್ತಿರುತ್ತದೆ. ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಇದೆ. ಟಿವಿ, ಉಚಿತ ಉಪಾಹಾರದ ವ್ಯವಸ್ಥೆ ಇದ್ದು ಇಡೀ ಕೊಠಡಿ 27 ಡಿಗ್ರಿ ಸೆಲ್ಸಿಯಸ್ ಕೂಲಿಂಗ್ ಸಿಸ್ಟಮ್ ಒಳಗೊಂಡಿರುವುದು ವಿಶೇಷ.
