
ಹುಬ್ಬಳ್ಳಿ: 2025-26ನೇ ಹಣಕಾಸು ಬಜೆಟ್ ನಲ್ಲಿ ವರ್ಷದಲ್ಲಿ ರೈಲ್ವೆಯ ಬೆಳವಣಿಗೆ ಮತ್ತು ದಕ್ಷತೆ ವೇಗಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ವಿಡಿಯೋ ಕಾನ್ಫೆರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ನಲ್ಲಿ ರೈಲ್ವೆಗಾಗಿ ಕರ್ನಾಟಕಕ್ಕೆ ₹7,564 ಕೋಟಿ ಮೀಸಲಿರಿಸಲಾಗಿದೆ. ಈ ಹಿಂದಿನ ಯುಪಿಎ ಸರ್ಕಾರದ ಅಧಿಕಾರದ ಅವಧಿ ಹೋಲಿಸಿದರೆ 9 ಪಟ್ಟು ಹೆಚ್ಚು ಹಣ ನೀಡಲಾಗಿದೆ. ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳಲ್ಲಿ ನಮೋ ಭಾರತ ರೈಲು ಓಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಸಾಮರ್ಥ್ಯ ದುರ್ಬಲಗೊಂಡಿರುವ ರೈಲು ಹಳಿಗಳನ್ನು ಹಂತ-ಹಂತವಾಗಿ ಬದಲಾಯಿಸಲಾಗುತ್ತಿದ್ದು, 4-5 ವರ್ಷಗಳಲ್ಲಿ ಎಲ್ಲೆಡೆ ಹೊಸ ಹಳಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳ ಮಧ್ಯೆ ನಮೋ ಭಾರತ ರೈಲು ಓಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. 100, 150, 200 ಕಿಮೀ ಅಂತರಗಳ ರೈಲು ನಿಲ್ದಾಣಗಳ ಮಧ್ಯೆ ಈ ರೈಲು ಸಂಚರಿಸಲಿದೆ. ಬೆಂಗಳೂರು ಮತ್ತು ಮೈಸೂರು ಮಧ್ಯೆ ನಮೋ ಭಾರತ ರೈಲು ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ 100 ಹೊಸ ಅಮೃತ ಭಾರತ ಹಾಗೂ 200 ಹೊಸ ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದು ಹೇಳಿದರು.
