
ಮಂಗಳೂರು: ಕರಾವಳಿಯ ಹಾಗೂ ಜಿಲ್ಲೆಯಾದ್ಯಂತ ಗುರುವಾರ ಸಂಜೆ ನಂತರ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿ ಸೆಕೆಯ ಬೇಗೆ ಹೆಚ್ಚು ಇತ್ತು. ಆದರೆ ಸಂಜೆಯಾಗುತ್ತಿದಂತೆ ಗುಡುಗು ಸಿಡಿಲಿನಿಂದ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಸವಣಾಲು, ಕಡಿರುದ್ಯಾವರ, ರಾಮಕುಂಜ, ತಣ್ಣೀರುಪಂತ, ಮೈರೋಲ್ತಡ್ಕ, ಬಾಯಾರು, ಕರೋಪಾಡಿ, ಪುತ್ತೂರು, ಸುಳ್ಯ, ಪುತ್ತೂರು, ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ.
ಉಡುಪಿಯಲ್ಲಿ ನಗರದ ವಿವಿಧೆಡೆ ಗುರುವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಮಧ್ಯಾಹ್ನ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರ್ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.
