
ವಿಟ್ಲ: ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪಕಳಕುಂಜ ಮೂಲದ, ಅಳಿಕೆ ನಿವಾಸಿ, ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್(76) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಜ.7ರಂದು ನಿಧನರಾಗಿದ್ದಾರೆ.
ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಪೂರೈಸಿದರು.
ವಿವೇಕಾನಂದ ಕಾಲೇಜಿನಲ್ಲಿ (ಪುತ್ತೂರು) ವ್ಯಾಸಂಗ ಮಾಡಿ ಬಿ.ಎಸ್ಸಿ. ಪದವಿಯನ್ನು ಪಡೆದ (ಬಯೋಲಜಿ) ಶ್ಯಾಮ ಭಟ್ಟರು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.
ನಂತರ ಸರಕಾರೀ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬಿ.ಎಡ್. ಶಿಕ್ಷಣವನ್ನು ಪೂರೈಸಿದರು. ವಿಠಲ ಪದವಿಪೂರ್ವ ಕಾಲೇಜು ವಿಟ್ಲದಲ್ಲಿ 32 ವರ್ಷ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಬರೆದ ಅಪ್ರಕಟಿತವಾದ ಅನೇಕ ಪುಸ್ತಕಗಳಿವೆ. ಉಳಿಯ ಧನ್ವಂತರೀ ಯಕ್ಷಗಾನ ಕಲಾ ಸಂಘದ ವತಿಯಿಂದ ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ (ರಿ.), ವಿಟ್ಲ ತಂಡಕ್ಕೆ ಪ್ರಥಮ ಪ್ರಶಸ್ತಿ ಬಂದಿತ್ತು. ಒರಿಸ್ಸಾದಲ್ಲಿ ಕನ್ನಡ ಸಂಘದ ವತಿಯಿಂದ ಸುನಾಬೇಡ ಎಂಬಲ್ಲಿ (1984), ಬೆಂಗಳೂರು, ಮುಂಬಯಿ ಮೊದಲಾದ ಕಡೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಮೃತರು ಪತ್ನಿ, ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
