
ಮಂಗಳೂರು: ರಾಜ್ಯ ಸರಕಾರವು ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆಗೆ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್ಗಳ ಪರಿಶೀಲನೆಗೆ ಸೂಚನೆ ಬಂದಿದ್ದು, ಈ ಪೈಕಿ ಶೇ. 2ರಷ್ಟು ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.
ಕಾರ್ಡ್ ಪರಿಷ್ಕರಣೆಗೆ ಮುಂದಾಗಿರುವುದರಿಂದ ಪೂರಕ ದಾಖಲೆಯನ್ನು ನೀಡುವುದಕ್ಕಾಗಿ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಅನ್ನಭಾಗ್ಯ ಅಕ್ಕಿ ಪಡೆಯುವವರಿಗೆ ಸಮಸ್ಯೆಯಾಗಿದೆ.
ಆದಾಯ ಮತ್ತು ಮನೆಯ ಪರಿಸ್ಥಿತಿ ಅವಲೋಕಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಕಾರಣಕ್ಕಾಗಿ ನಿತ್ಯ ನೂರಾರು ಮಂದಿ ತಾಲೂಕು ಕಚೇರಿಗೆ ಬಂದು ಆಧಾರ್, ವರಮಾನ ಮಾಹಿತಿ ಮುಂತಾದ ವಿವರಗಳನ್ನು ನೀಡುತ್ತಿದ್ದಾರೆ.
ಆದಾಯ ತೆರಿಗೆ ಪಾವತಿದಾರರು ಅಲ್ಲದಿದ್ದರೂ ಆದಾಯ ತೆರಿಗೆ ಪಾವತಿದಾರರು ಎಂದು ಕಾರಣ ನೀಡಿ ಅನೇಕರ ಕಾರ್ಡ್ ರದ್ದು ಮಾಡಿದ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಡು ಅಮಾನತು ಹಾಗೂ ರದ್ದು ಮಾಡುವ ಅಧಿಕಾರ ಆಹಾರ ನಿರೀಕ್ಷಕರಿಗಿದೆ. ಕಾರ್ಡ್, ಪಡಿತರ ತಡೆಹಿಡಿದರೆ ಆದಾಯ ಪ್ರಮಾಣೀಕರಣ ದಾಖಲಿಸಿ ಪರಿಶೀಲನೆಗೆ ಅರ್ಜಿ ನೀಡಿದರೆ ಆಹಾರ ನಿರೀಕ್ಷಕರು ಖುದ್ದು ಪರಿಶೀಲಿಸಿ ಕಾರ್ಡ್ ರದ್ದು, ಅಮಾನತು ಅಥವಾ ಸಕ್ರಿಯಗೊಳಿಸುವ ಬಗ್ಗೆ ನಿರ್ಧರಿಸುತ್ತಾರೆ.
ಪಡಿತರ ಚೀಟಿಯ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ರದ್ದು ಮಾಡುವುದಿಲ್ಲ. ಹಾಗೂ ಮೊದಲಿಗೆ ಅನರ್ಹ ಆಗುವ ಸಾಧ್ಯತೆಯ ಪಡಿತರ ಚೀಟಿಯ ಮಾಹಿತಿಯನ್ನು ಎಲ್ಲ ಪಡಿತರ ವಿತರಕರಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
