
ಸುಳ್ಯ: ಹಲವು ವರ್ಷಗಳ ಹಿಂದೆ ರಬ್ಬರ್ಗೆ ಉತ್ತಮ ಧಾರಣೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಕರಾವಳಿ ಕೃಷಿಕರು ಗಣನೀಯವಾಗಿ ರಬ್ಬರ್ ಬೆಳೆಯನ್ನು ಬೆಳೆಸಿದ್ದರು.
ಈಗ ಕುಸಿತದ ಹಾದಿಯಲ್ಲಿ ಸಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಮಳೆಗಾಲ ಆರಂಭದಲ್ಲಿ ಏರಿಕೆಯಾಗಿದ್ದ ರಬ್ಬರ್ ಧಾರಣೆ ನಿಧಾನ ಗತಿಯಲ್ಲಿ ಇಳಿಕೆ ಕಾಣುತಿದ್ದು ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ.
ಹೆಚ್ಚಿನ ಪ್ರಮಾಣದಲ್ಲಿ ರಬ್ಬರ್ ಆಮದು ಆಗಿರುವ ಕಾರಣದಿಂದ ದೇಶೀಯ ರಬ್ಬರ್ ಉತ್ಪಾದಕರ ಮೇಲೆ ಧಾರಣೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಈ ವರ್ಷದ ಜುಲೈ ತಿಂಗಳ ಮೊದಲು ಕೆಜಿ ರಬ್ಬರ್ಗೆ(ಗ್ರೇಡ್) 200ಕ್ಕಿಂತ ಕಡಿಮೆ ಧಾರಣೆ ಇತ್ತು. ಬಳಿಕದಲ್ಲಿ ನಿಧಾನ ಗತಿಯಲ್ಲಿ ಹೆಚ್ಚಳ ಕಂಡು ಆಗಸ್ಟ್ ವೇಳೆಗೆ ಗ್ರೇಡ್ ರಬ್ಬರ್ ಕೆಜಿಗೆ 244-255 ರೂ. ವರೆಗೂ ಹೆಚ್ಚಳವಾಗಿತ್ತು.
ಅಕ್ಟೋಬರ್ ಆರಂಭದಲ್ಲಿ 210ಕ್ಕೆ ತಲುಪಿತ್ತು. ಈ ವಾರ ಗ್ರೇಡ್ ರಬ್ಬರ್ ಕೆಜಿಗೆ 178 ಹಾಗೂ ರಬ್ಬರ್ ಸ್ಕ್ರಾಪ್ ಕೆಜಿಗೆ 112ರಂತೆ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಹಾರ ನಡೆದಿದ್ದು, ಬೆಲೆ ಇನ್ನಷ್ಟು ಪಾತಾಳಕ್ಕೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
