
ಮಣಿಪಾಲ: 2025ರ ಜ.16ರಿಂದ 23ರ ವರೆಗೆ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ರಾಜ್ಯ ಒಲಿಂಪಿಕ್ಸ್ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಸಂಘಟಿಸುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 13ಕ್ಕೂ ಹೆಚ್ಚು ಕ್ರೀಡೆಗಳು 8 ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಮಾಹೆಯ ವಿ.ವಿ. ಕ್ರೀಡಾಂಗಣದಲ್ಲಿ ನಡೆಯಲಿದ್ದು, 3,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಮಾಹೆಯ ವಿ.ವಿ ಕ್ರೀಡಾಂಗಣದಲ್ಲಿ ಲಾನ್ ಟೆನಿಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಹಾಕಿ ನಡೆಯಲಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಕಬಡ್ಡಿ, ಟೈಕೊಂಡ, ವಾಲಿಬಾಲ್ ಮೊದಲಾದ ಕ್ರೀಡೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಕ್ರೀಡೆಗೆ ಅನುಗುಣವಾಗಿ ಮೈದಾನವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಬೇಕು. ಕ್ರೀಡಾಪಟು ಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿ ಕೊಳ್ಳಲು ಮುಂದಾಗಬೇಕು ಎಂದು ಸೂಚಿಸಿದರು.
ಕ್ರೀಡಾಪಟುಗಳು, ಅಧಿಕಾರಿಗಳು, ತೀರ್ಪುಗಾರರು ಸಹಿತ ಕ್ರೀಡಾಕೂಟಕ್ಕೆ ಸಂಬಂಧಿಸಿದವರಿಗೆ ಅಗತ್ಯ ವಸತಿ ಸೌಕರ್ಯ, ಊಟೋಪಹಾರದ ವ್ಯವಸ್ಥೆ ಸಹಿತ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಸಚಿವರು ಬರುವ ಸಾಧ್ಯತೆಯಿದೆ ಎಂದರು.
