
ಚಿಕ್ಕಮಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 7 ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇದೀಗ ಗೋವಿಂದ ಬಾಬು ಪೂಜಾರಿ ಆಪ್ತನಿಗೆ ಕರೆ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಹುಮುಖ್ಯ ಸಾಕ್ಷಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳದ ಮಾಜಿ ಸಂಚಾಲಕ ತುಡುಕೂರು ಮಂಜು ಅವರಿಗೆ ಸಿಸಿಬಿ ಪೊಲೀಸರು ದೂರಾವಣಿ ಕರೆ ಮೂಲಕ ಬುಲಾವ್ ನೀಡಿದ್ದಾರೆ. ಇಂದು ಸಿಸಿಬಿ ಪೊಲೀಸರ ಮುಂದೆ ಮಂಜು ವಿಚಾರಣೆಗೆ ಹಾಜರಾಗಲಿದ್ದು, ಇವರ ಹೇಳಿಕೆ ಈ ಪ್ರಕರಣಕ್ಕೆ ಮಹತ್ವದ ತಿರುವನ್ನು ನೀಡಲಿದೆ.
ಸಂಪೂಣ ವಂಚನೆ ಪ್ರಕರಣದ ಕುರಿತು ಗೋವಿಂದ ಬಾಬು ಪೂಜಾರಿಗೆ ಮಾಹಿತಿಯನ್ನು ನೀಡಿರುವ ಮಂಜು ಅವರಿಂದ ಇಂದು ಸಿಸಿಬಿ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಬಳಿಕ ಈ ಪ್ರಕರಣ ಯಾವ ಆಯಾಮವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
