ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರ ಬಳಿ 14.8 ಕಿಲೋಗ್ರಾಂಗಳಷ್ಟು ಚಿನ್ನ ಪತ್ತೆಯಾದ ನಂತರ ಅವರನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಮತ್ತು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ನಟಿ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅಧಿಕಾರಿಗಳು ನಟಿಯ ವಿಚಾರಣೆ ನಡೆಸುತ್ತಿದ್ದಾರೆ. ರನ್ಯಾ ಕೇಸ್ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಐಪಿಎಸ್ ಅಧಿಕಾರಿ ಮತ್ತು ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ವಸತಿ ನಿಗಮ) ರಾಮಚಂದ್ರ ರಾವ್ ಅವರ ಮಲಮಗಳು ಎಂದು ಹೇಳಿಕೊಳ್ಳುವ ರನ್ಯಾ, ಕರ್ನಾಟಕದ ಚಿಕ್ಕಮಗಳೂರಿನವರು. ಬೆಂಗಳೂರಿನ ದಯಾನದ್ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 2014 ರಲ್ಲಿ ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರ ‘ಮಾಣಿಕ್ಯ’ ಚಿತ್ರದಲ್ಲಿ ನಟಿಯಾಗಿದ್ದರು. ಆ ಬಳಿಕ ತಮಿಳು ಹಾಗೂ ಬೇರೆ ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದರು.
ರನ್ಯಾ ರಾವ್ ಅವರ ವಿದೇಶ ಪ್ರಯಾಣ ಹೆಚ್ಚುತ್ತಿರುವ ಹಿನ್ನೆಲೆ ಕಸ್ಟಮ್ ಆಫೀಸರ್ಸ್ ಹಾಗೂ ಪೊಲೀಸರು ನಟಿ ಮೇಲೆ ಕಣ್ಣಿಟ್ಟಿದ್ದರು. ಮಾರ್ಚ್ 3 ರ ರಾತ್ರಿ, ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ಡಿಆರ್ ಐ ಅಧಿಕಾರಿಗಳು ರನ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಡಿಆರ್ ಐ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ರನ್ಯಾ ರಾವ್ ತನ್ನ ದೇಹ ಮತ್ತು ಬಟ್ಟೆಗಳಲ್ಲಿ ದೊಡ್ಡ ಪ್ರಮಾಣದ ಚಿನ್ನವನ್ನು ಅಡಗಿಸಿಟ್ಟಿದ್ದರು. ಆಕೆಯಿಂದ ಸುಮಾರು 14.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದು 12 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ವರದಿಯಾಗಿದೆ.
ಕಳೆದ 15 ದಿನಗಳಲ್ಲಿ ರನ್ಯಾ ರಾವ್ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿದ್ದು, ಇದು ಪೊಲೀಸರಿಗೆ ಆಕೆಯ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಚಿನ್ನ ಕಳ್ಳಸಾಗಣೆಯಲ್ಲಿ ನಟಿ ರನ್ಯಾಗೆ ಇತರೆ ಅಧಿಕಾರಿಗಳು ಅಥವಾ ಪೊಲೀಸರು ಸಹಾಯ ಮಾಡಿದ್ದಾರಾ ಎಂದು ಡಿ ಆರ್ ಐ ತನಿಖೆ ನಡೆಸುತ್ತಿದೆ.
ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರ ಮುಂದೆ ನಟಿ ರಾನ್ಯಾ ಅವರನ್ನು ಪೊಲೀಸರು ಹಾಜರು ಪಡಿಸಿದ್ದು, ಡಿ ಆರ್ ಐ ಅಧಿಕಾರಿಗಳು ಬಂಧನಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ನಟಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ನಟಿ ರನ್ಯಾ ರಾವ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
